NH 48ರಲ್ಲಿ ವೇಗದ ವಾಹನಗಳಿಂದ ವನ್ಯಜೀವಿಗಳಿಗೆ ಕುತ್ತು; ಚಿರತೆ, ಕರಡಿಗಳ ಸಾವು ಹೆಚ್ಚಳ! | Wildlife Death

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಈ ಘಟನೆಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದೆ.
NH 48 Wildlife Deaths
NH 48ರಲ್ಲಿ ವನ್ಯಜೀವಿಗಳಿಗೆ ಕಂಟಕವಾದ ವೇಗದ ವಾಹನಗಳು
Published on: 
Summary

ರಾಷ್ಟ್ರೀಯ ಹೆದ್ದಾರಿ 48 ಮತ್ತು 13ರಲ್ಲಿ ವನ್ಯಜೀವಿಗಳ ಸಾವು ಹೆಚ್ಚಳ

ಚಿತ್ರದುರ್ಗದ ತಮಟಕಲ್ಲು ಬಳಿ ಅಕ್ಟೋಬರ್ 13ರಂದು ಚಿರತೆ ಸಾವು

ಆನಗೋಡು ಬಳಿ ಚಿರತೆ ರಕ್ಷಣೆಗೆ ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ದಾಳಿ

NH 48 Wildlife Deaths: ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ (NH) ಗಳಲ್ಲಿ ವೇಗದ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿವೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಎನ್​ಹೆಚ್ 48 ಹಾಗೂ 13ರಲ್ಲಿ ಚಿರತೆ, ಕರಡಿ ಸೇರಿದಂತೆ ಹಲವು ಪ್ರಾಣಿಗಳು ವಾಹನ ಡಿಕ್ಕಿಯಿಂದ ಗಾಯಗೊಳ್ಳುತ್ತಿವೆ ಅಥವಾ ಪ್ರಾಣ ಕಳೆದುಕೊಳ್ಳುತ್ತಿವೆ.

ಬೆಟ್ಟಗುಡ್ಡಗಳು ಮತ್ತು ಕುರುಚಲು ಅರಣ್ಯಗಳ ನಡುವೆ ಹಾದುಹೋಗುವ ಈ ಹೆದ್ದಾರಿಗಳಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯ. ಹಗಲಿನಲ್ಲಿ ಜನರ ಓಡಾಟ ಹೆಚ್ಚಿರುವುದರಿಂದ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಪ್ರಾಣಿಗಳು ಮಧ್ಯರಾತ್ರಿಯ ಬಳಿಕ ಹೊರಬರುತ್ತವೆ. ಈ ವೇಳೆ ರಸ್ತೆ ದಾಟುವಾಗ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ.

ಒಂದೇ ಸ್ಥಳದಲ್ಲಿ ಚಿರತೆ, ಕರಡಿಗಳ ಸಾವು

ಅಕ್ಟೋಬರ್ 13ರ ರಾತ್ರಿ ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಇದೇ ಸ್ಥಳದಲ್ಲಿ ಚಿರತೆ ಮತ್ತು ಕರಡಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leopard attack near Anagodu
ಆನಗೋಡು ಬಳಿ ಚಿರತೆ ರಕ್ಷಣೆಗೆ ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ದಾಳಿ

ಸೆಪ್ಟೆಂಬರ್ 8ರಂದು ದಾವಣಗೆರೆ ತಾಲ್ಲೂಕಿನ ಆನಗೋಡು ಬಳಿ ಎನ್​ಹೆಚ್​ 48ರಲ್ಲಿ ವಾಹನ ಡಿಕ್ಕಿಯಾಗಿ ಚಿರತೆಯೊಂದು ಗಾಯಗೊಂಡಿತ್ತು. ಮರುದಿನ ರಕ್ಷಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ದಾಳಿ ನಡೆಸಿತ್ತು. ಬಳಿಕ ಅರವಳಿಕೆ ನೀಡಿ ಚಿರತೆಯನ್ನು ಹಂಪಿ ಸಮೀಪದ ಮೃಗಾಲಯಕ್ಕೆ ಕರೆದೊಯ್ದು, ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.

ಅಪಘಾತದ ಬಳಿಕ ಮಾಹಿತಿ ನೀಡದೆ ಪರಾರಿ

ರಾತ್ರಿ ವೇಳೆ ವನ್ಯಜೀವಿಗಳಿಗೆ ಡಿಕ್ಕಿ ಹೊಡೆಯುವ ಕೆಲವು ವಾಹನ ಚಾಲಕರು, ಕಾನೂನು ಕ್ರಮದ ಭಯದಿಂದ ಅರಣ್ಯ ಇಲಾಖೆ ಅಥವಾ ಹೆದ್ದಾರಿ ಗಸ್ತು ತಂಡಕ್ಕೆ ಮಾಹಿತಿ ನೀಡದೆ ಪರಾರಿಯಾಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿರತೆ, ಕರಡಿ ಮಾತ್ರವಲ್ಲದೆ ಜಿಂಕೆ, ಕಾಡುಬೆಕ್ಕು, ಕಾಡುಹಂದಿ ಸೇರಿದಂತೆ ಹಲವು ಪ್ರಾಣಿಗಳು ಅಪಘಾತಗಳಲ್ಲಿ ಸಾವನ್ನಪ್ಪುತ್ತಿವೆ. ಕೆಲವು ಪ್ರಾಣಿಗಳು ಗಾಯಗೊಂಡು ಕಾಡಿನೊಳಗೆ ತೆರಳಿ ಸಾಯುವುದರಿಂದ ಸಾವಿಗೆ ನಿಖರ ಕಾರಣ ತಿಳಿಯುತ್ತಿಲ್ಲ ಎಂದು ರೈತರು ಹೇಳಿದ್ದಾರೆ.

ಇದನ್ನೂ ಓದಿ: ಸುಮ್ಮನೆ ಕುಳಿತಾಗಲೂ ಕಾಲು ಅಲ್ಲಾಡಿಸ್ತೀರಾ? ಕೈಗಳು ತಾವಾಗಿಯೇ ಮುದ್ರೆ ಮಾಡುತ್ತವೆಯಾ? ಇಲ್ಲಿದೆ ಅಚ್ಚರಿಯ ಕಾರಣ! | Fidgeting

ಹೆದ್ದಾರಿ ಅಪಘಾತಗಳಲ್ಲಿ ವನ್ಯಜೀವಿಗಳ ಸಾವು ಹೆಚ್ಚುತ್ತಿರುವ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net