ಸುಮ್ಮನೆ ಕುಳಿತಾಗಲೂ ಕಾಲು ಅಲ್ಲಾಡಿಸ್ತೀರಾ? ಕೈಗಳು ತಾವಾಗಿಯೇ ಮುದ್ರೆ ಮಾಡುತ್ತವೆಯಾ? ಇಲ್ಲಿದೆ ಅಚ್ಚರಿಯ ಕಾರಣ! | Fidgeting

ಸುಮ್ಮನೆ ಕುಳಿತಾಗ ಕಾಲು ಅಲ್ಲಾಡಿಸುವುದು, ಕೈಗಳಿಂದ ಗೊತ್ತಿಲ್ಲದೆ ಮುದ್ರೆ ಮಾಡುವುದು ಯಾಕೆ? ಇದರ ಹಿಂದೆ ಇರುವ ವೈಜ್ಞಾನಿಕ ಮತ್ತು ಮಾನಸಿಕ ಕಾರಣಗಳೇನು? ಇಲ್ಲಿದೆ ಮಾಹಿತಿ.
Reasons for the shaking legs & Finger
ಸಾಂದರ್ಭಿಕ ಚಿತ್ರ
Published on: 

Leg Shaking: ನೀವು ಸುಮ್ಮನೆ ಕುಳಿತಿರುತ್ತೀರಿ. ಆದ್ರೆ ಕಾಲು ಮಾತ್ರ ತಾನಾಗಿಯೇ ಅಲ್ಲಾಡುತ್ತಿರುತ್ತೆ. ಕೆಲವೊಮ್ಮೆ ಕೈ ಬೆರಳುಗಳಿಂದ ಏನಾದರೂ ಆಕಾರ ಮಾಡುತ್ತಿರುತ್ತೀರಿ. ಅಷ್ಟೇ ಅಲ್ಲ, ಯೋಚನೆಯಲ್ಲಿ ಮುಳುಗಿರುವಾಗ ಅಥವಾ ಬೇಸರವಾದಾಗ ಇಂಥ ಚಲನೆಗಳು ಗೊತ್ತಿಲ್ಲದೆಯೇ ನಡೆಯುತ್ತವೆ. ಅಷ್ಟಕ್ಕೂ ಹೀಗಾಗೋದು ಯಾಕೆ? ಇದರ ಹಿಂದೆ ನಮ್ಮ ಮೆದುಳು ಮತ್ತು ನರಮಂಡಲದ ಕೆಲಸವೂ ಕಾರಣವಾಗಿರಬಹುದು.

ಸಾಮಾನ್ಯವಾಗಿ ಇಂಥ ಸಣ್ಣ ಚಲನೆಗಳನ್ನು ಫಿಡ್ಜೆಟಿಂಗ್ (Fidgeting) ಎಂದು ಕರೆಯಲಾಗುತ್ತದೆ. ಇದಕ್ಕೆ ಒಂದೇ ಕಾರಣವಿಲ್ಲ. ಒತ್ತಡ, ಆತಂಕ, ಏಕಾಗ್ರತೆ, ಕೆಫೀನ್ ಸೇವನೆ ಅಥವಾ ರೂಢಿಯಾಗಿರುವ ಅಭ್ಯಾಸಗಳು ಇದಕ್ಕೆ ಕಾರಣವಾಗಬಹುದು.

1. ದೇಹದ ಚಡಪಡಿಕೆಯನ್ನು ಕಡಿಮೆ ಮಾಡಲು

ಬಹಳ ಹೊತ್ತು ಒಂದೇ ಕಡೆ ಕೂತಿದ್ದಾಗ ಕೈಕಾಲುಗಳನ್ನು ಅಲುಗಾಡಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಕಾಫಿ, ಟೀ ಹೆಚ್ಚಾಗಿ ಕುಡಿದಾಗಲೂ ಚಡಪಡಿಕೆ ಹೆಚ್ಚಾಗಬಹುದು. ಇಂಥ ಸಂದರ್ಭದಲ್ಲಿ ಕಾಲು ಅಲ್ಲಾಡಿಸುವುದು ಅಥವಾ ಬೆರಳುಗಳನ್ನು ಆಡಿಸುವುದು ಕೆಲವರಿಗೆ ಸಹಜವಾಗಿ ನಡೆಯುತ್ತದೆ. ಆದರೆ ಇದನ್ನು ದೇಹದಲ್ಲಿ ಹೆಚ್ಚುವರಿ ಶಕ್ತಿ ಸಂಗ್ರಹವಾಗಿದೆ ಎಂಬುದಕ್ಕೆ ನೇರವಾದ ಸಾಕ್ಷಿ ಎಂದು ಹೇಳಲಾಗುವುದಿಲ್ಲ.

2. ಯೋಚನೆ ಮಾಡುವಾಗ ಅಥವಾ ಬೋರ್ ಆದಾಗ

ಯಾವುದಾದರೂ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವಾಗ, ಓದುವಾಗ ಅಥವಾ ಬೋರ್ ಆಗಿರುವಾಗ ಕೈಕಾಲುಗಳನ್ನು ಅಲುಗಾಡಿಸುವುದನ್ನು ಗಮನಿಸಿರಬಹುದು. ಇಂಥ ಚಲನೆಗಳು ಕೆಲವರಿಗೆ ಗಮನ ಕೇಂದ್ರೀಕರಿಸಲು ಅಥವಾ ಜಾಗೃತವಾಗಿರಲು ಸಹಾಯ ಮಾಡಬಹುದು. ಆದರೆ ಎಲ್ಲರಲ್ಲೂ ಇದೇ ಪರಿಣಾಮ ಇರುತ್ತದೆ ಅಂತೇನಿಲ್ಲ.

Shake  leg
ಕುಳಿತಾಗ ಕಾಲು ಅಲ್ಲಾಡಿಸುವುದು

3. ಆತಂಕ ಮತ್ತು ಒತ್ತಡವೂ ಕಾರಣವಾಗಬಹುದು

ಮನಸ್ಸಿನಲ್ಲಿ ಟೆನ್ಷನ್, ಗಾಬರಿ ಅಥವಾ ಆತಂಕ ಇದ್ದಾಗ ದೇಹವೂ ಅದಕ್ಕೆ ಪ್ರತಿಕ್ರಿಯಿಸುತ್ತದೆ. ಹೃದಯ ಬಡಿತ ಹೆಚ್ಚಾಗುವುದು, ಚಡಪಡಿಕೆ ಉಂಟಾಗುವುದು ಮತ್ತು ಕೈಕಾಲುಗಳನ್ನು ಅಲುಗಾಡಿಸುವುದು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ಚಲನೆಗಳು ನಮಗೆ ಅರಿವಿಲ್ಲದೆಯೇ ನಡೆಯುತ್ತವೆ.

4. ಗೊತ್ತಿಲ್ಲದೆಯೇ ಅಭ್ಯಾಸವಾಗಿರಬಹುದು

ಕೆಲವರಿಗೆ ಬಾಲ್ಯದಿಂದಲೇ ಕಾಲು ಅಲ್ಲಾಡಿಸುವ ಅಥವಾ ಕೈ ಬೆರಳುಗಳಿಂದ ಒಂದೊಂದು ಆಕಾರ ಮಾಡುವ ಅಭ್ಯಾಸ ಇರುತ್ತದೆ. ದಿನನಿತ್ಯದಲ್ಲಿ ಪದೇಪದೆ ಮಾಡುವುದರಿಂದ ಇದು ರೂಢಿಯಾಗಬಹುದು. ಯಾವುದೋ ಕೆಲಸದಲ್ಲಿ ಮಗ್ನರಾಗಿರುವಾಗ ಈ ಅಭ್ಯಾಸ ನಡೆಯುತ್ತಿರುವುದೇ ಗಮನಕ್ಕೆ ಬರದಿರಬಹುದು.

5. ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಸಾಮಾನ್ಯವಾಗಿ ಕಾಲು ಅಲ್ಲಾಡಿಸುವುದು ಅಥವಾ ಕೈ ಬೆರಳುಗಳನ್ನು ಆಡಿಸುವುದು ಆತಂಕಪಡುವ ವಿಷಯವಲ್ಲ. ಆದರೆ ಕಾಲುಗಳನ್ನು ಅಲ್ಲಾಡಿಸದೆ ಇರಲು ಸಾಧ್ಯವಾಗದಿರುವುದು, ವಿಶೇಷವಾಗಿ ರಾತ್ರಿ ವಿಶ್ರಾಂತಿ ಪಡೆಯುವಾಗ ಕಾಲುಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಂಡು ಚಲಿಸಬೇಕೆನಿಸುವುದು ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ (RLS) ಲಕ್ಷಣವಾಗಿರಬಹುದು.

moving fingers.
ಕೈ ಬೆರಳುಗಳ ಆಡಿಸುವುದು

ಕೆಲವು ಔಷಧಿಗಳ ಅಡ್ಡಪರಿಣಾಮದಿಂದಲೂ ತೀವ್ರ ಚಡಪಡಿಕೆ ಉಂಟಾಗಬಹುದು. ಇಂಥ ಸಮಸ್ಯೆ ಪದೇಪದೆ ಕಾಣಿಸಿಕೊಂಡರೆ, ನಿದ್ರೆ ಅಥವಾ ದಿನನಿತ್ಯದ ಕೆಲಸಕ್ಕೆ ತೊಂದರೆಯಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: NHAI: ಟೋಲ್‌ ಪ್ಲಾಜಾ ಶೌಚಾಲಯ ಗಲೀಜಾಗಿದೆಯೇ? ಫೋಟೋ ಕಳುಹಿಸಿದರೆ 1,000 ರೂ. ಬಹುಮಾನ!

ಸುಮ್ಮನೆ ಕುಳಿತಾಗ ಕಾಲು ಅಲ್ಲಾಡಿಸುವುದು, ಬೆರಳುಗಳನ್ನು ಚಲಿಸುವುದು ಸಾಮಾನ್ಯ ಅಭ್ಯಾಸ. ಇದಕ್ಕೆ ಒತ್ತಡ, ಬೇಸರ, ಏಕಾಗ್ರತೆ ಅಥವಾ ರೂಢಿ ಕಾರಣವಾಗಿರಬಹುದು. ಪ್ರತಿಬಾರಿಯೂ ಇದನ್ನು ಕಾಯಿಲೆಯ ಲಕ್ಷಣವೆಂದು ಭಾವಿಸಬೇಕಿಲ್ಲ. ಆದರೆ ಚಲನೆಗಳು ನಿಯಂತ್ರಣಕ್ಕೆ ಸಿಗದೆ ದೈನಂದಿನ ಬದುಕಿಗೆ ತೊಂದರೆಯಾದರೆ ನಿರ್ಲಕ್ಷಿಸಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net