NHAI Clean Toilet Challenge: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳ ಶೌಚಾಲಯಗಳು ಗಲೀಜಾಗಿದ್ದರೆ, ಅದರ ಫೋಟೋ ತೆಗೆದು ದೂರು ಸಲ್ಲಿಸುವವರಿಗೆ 1,000 ರೂ. ಬಹುಮಾನ ನೀಡುವ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದೆ. 'ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್' ಹೆಸರಿನ ಈ ಅಭಿಯಾನವನ್ನು ಕೇಂದ್ರ ಸರ್ಕಾರದ 'ವಿಶೇಷ ಅಭಿಯಾನ 5.0' ಅಡಿಯಲ್ಲಿ ಜಾರಿಗೆ ತರಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಪ್ರಯಾಣಿಕರು ರಾಜಮಾರ್ಗಯಾತ್ರಾ (RajmargYatra) ಆ್ಯಪ್ನ ಇತ್ತೀಚಿನ ಆವೃತ್ತಿಯಲ್ಲಿ ಸ್ಥಳದ ವಿವರಗಳಿರುವ (ಜಿಯೋ-ಟ್ಯಾಗ್) ಫೋಟೋ ಅಪ್ಲೋಡ್ ಮಾಡಿ ದೂರು ಸಲ್ಲಿಸಬಹುದು.
ಶೌಚಾಲಯದ ಸ್ಪಷ್ಟ ಫೋಟೋವನ್ನು ಆ್ಯಪ್ನಲ್ಲಿ ಅಪ್ಲೋಡ್ ಮಾಡುವಾಗ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಮಾನ್ಯ ದೂರು ಸಲ್ಲಿಸಿದವರಿಗೆ ವಾಹನದ ನೋಂದಣಿ ಸಂಖ್ಯೆಗೆ ಲಿಂಕ್ ಆಗಿರುವ ಫಾಸ್ಟ್ಟ್ಯಾಗ್ ಮೂಲಕ 1,000 ರೂ. ರೀಚಾರ್ಜ್ ನೀಡಲಾಗುತ್ತದೆ. ಈ ಮೊತ್ತವನ್ನು ನಗದು ರೂಪದಲ್ಲಿ ಪಡೆಯಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ.
▪️ ಎನ್ಎಚ್ಎಐ ವ್ಯಾಪ್ತಿಯ ಶೌಚಾಲಯಗಳಿಗೆ ಮಾತ್ರ ಯೋಜನೆ ಅನ್ವಯ.
▪️ ಪೆಟ್ರೋಲ್ ಬಂಕ್ಗಳು ಮತ್ತು ರಸ್ತೆ ಬದಿಯ ಧಾಬಾಗಳ ಶೌಚಾಲಯಗಳಿಗೆ ಅನ್ವಯಿಸುವುದಿಲ್ಲ.
▪️ ಪ್ರತಿ ವಾಹನಕ್ಕೆ ಒಂದು ಬಹುಮಾನ ಮಾತ್ರ ಸಿಗುತ್ತದೆ.
▪️ ಒಂದೇ ಶೌಚಾಲಯದ ಬಗ್ಗೆ ದಿನದ ಮೊದಲ ಮಾನ್ಯ ದೂರಿಗೆ ಮಾತ್ರ ಬಹುಮಾನ ನೀಡಲಾಗುತ್ತದೆ.
▪️ ಫೋಟೋ ಸ್ಪಷ್ಟವಾಗಿರಬೇಕು; ಸಮಯ ಮತ್ತು ಸ್ಥಳದ ವಿವರ ಕಡ್ಡಾಯ.
▪️ ನಕಲಿ, ಎಡಿಟ್ ಮಾಡಿದ ಅಥವಾ ಮರುಸಲ್ಲಿಸಿದ ಫೋಟೋಗಳನ್ನು ತಿರಸ್ಕರಿಸಲಾಗುತ್ತದೆ.
ಸಲ್ಲಿಕೆಯಾದ ಫೋಟೋಗಳನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಮಾನವ ಪರಿಶೀಲನೆಯ ಮೂಲಕ ತಪಾಸಣೆ ಮಾಡಲಾಗುತ್ತದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಯೋಜನೆಯನ್ನು 2027ರ ಜೂನ್ 30ರವರೆಗೆ ವಿಸ್ತರಿಸಿದೆ. ಈ ಕುರಿತು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) 2026ರ ಜುಲೈ 23ರಂದು ಪ್ರಕಟಣೆ ಹೊರಡಿಸಿದೆ. ಹೆದ್ದಾರಿಗಳ ಸ್ವಚ್ಛತೆ, ಗುಂಡಿ ದುರಸ್ತಿ, ರಸ್ತೆ ಸುರಕ್ಷತಾ ಫಲಕಗಳ ಸುಧಾರಣೆ ಹಾಗೂ ಒತ್ತುವರಿ ತೆರವು ಕೂಡ ಅಭಿಯಾನದ ಭಾಗವಾಗಿವೆ.