ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಡಿಎಂಕೆ ಆಗ್ರಹ
ಎಸ್ಐಆರ್ ಸಂಪೂರ್ಣ ರದ್ದು ಮಾಡುವಂತೆ ಒತ್ತಾಯ
ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ಬೇಡಿಕೆ
ಕಾಂಗ್ರೆಸ್ ಮತ್ತು ಟಿವಿಕೆ ವಿರುದ್ಧ ದ್ವಂದ್ವ ನಿಲುವಿನ ಆರೋಪ
SIR Controvers: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಡಿಎಂಕೆ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದೆ. ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಶನಿವಾರ ನಡೆದ ಸಂಸದರ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸಲಾಗಿದೆ.
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಬಲ ಸೂಚಿಸಿರುವ ಡಿಎಂಕೆ, ಕಾಂಗ್ರೆಸ್ ಮತ್ತು ತಮಿಳಗ ವೆಟ್ರಿ ಕಳಗಂ (TVK) ವಿರುದ್ಧವೂ ದ್ವಂದ್ವ ನಿಲುವಿನ ಆರೋಪ ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ.
ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಡಿಎಂಕೆ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಿದೆ. ಜ್ಞಾನೇಶ್ ಕುಮಾರ್ ವಜಾ, ಎಸ್ಐಆರ್ ವಿರೋಧಿ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಬಲ ಹಾಗೂ ಕಾಂಗ್ರೆಸ್, ಟಿವಿಕೆ ವಿರುದ್ಧ ದ್ವಂದ್ವ ನಿಲುವಿನ ಆರೋಪ ಪ್ರಮುಖವಾಗಿವೆ. ಚುನಾವಣಾ ಅಕ್ರಮಗಳ ಕುರಿತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಪಕ್ಷ ನಿರ್ಧರಿಸಿದೆ.
- ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.
- ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಮತದಾನ ಮರುಜಾರಿಗೊಳಿಸಬೇಕು.
- ಚುನಾವಣಾ ಅಕ್ರಮಗಳ ಕುರಿತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬೇಕು.
ಇನ್ನು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆಯೂ ತನಿಖೆ ನಡೆಸಬೇಕೆಂದು ಡಿಎಂಕೆ ಒತ್ತಾಯಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಾಗಲೇ, 2025ರ ಜುಲೈನಲ್ಲಿ ಸ್ಟಾಲಿನ್ ಎಸ್ಐಆರ್ ವಿರುದ್ಧ ಧ್ವನಿ ಎತ್ತಿದ್ದರು ಎಂದು ಸಭೆಯಲ್ಲಿ ಉಲ್ಲೇಖಿಸಲಾಗಿದೆ. ಬಿಹಾರದಲ್ಲಿ ನಡೆದ ಮತದಾರರ ಹಕ್ಕುಗಳ ಯಾತ್ರೆಯಲ್ಲೂ ಅವರು ಭಾಗವಹಿಸಿದ್ದರು. ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಕರುಣಾನಿಧಿ ಕೂಡ ಅವರೊಂದಿಗೆ ಪಾಲ್ಗೊಂಡಿದ್ದರು.
ಇದನ್ನೂ ಓದಿ: Kota Student Fight: ಹುಡುಗಿಯ ವಿಚಾರಕ್ಕೆ ಬಾಲಕರ ಕಿರಿಕ್; ಆಟಿಕೆ ಗನ್ನಿಂದ ಸಹಪಾಠಿಯ ತಲೆಗೆ ಹಲ್ಲೆ!
2025ರ ಅಕ್ಟೋಬರ್ನಲ್ಲಿ ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಎಸ್ಐಆರ್ ಘೋಷಿಸಿದಾಗಲೂ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡು ಮತ್ತು ಕೇರಳದಲ್ಲಿ ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್ ದ್ವಂದ್ವ ನಿಲುವು ತಾಳಿದೆ ಎಂದು ಡಿಎಂಕೆ ಆರೋಪಿಸಿದ್ದು, ಅಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳಲ್ಲೂ ಒಂದೇ ನಿಲುವು ಹೊಂದಿರಬೇಕು ಎಂದು ಹೇಳಿದೆ. (ಏಜೆನ್ಸೀಸ್)