Kota Coaching Centre: ರಾಜಸ್ಥಾನದ ಕೋಟಾದ ಕೋಚಿಂಗ್ ಸೆಂಟರ್ನಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, 16 ವರ್ಷದ ಜೆಇಇ ಆಕಾಂಕ್ಷಿಯ ಮೇಲೆ ಸಹಪಾಠಿ ಆಟಿಕೆ ಗನ್ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೋಟಾದ ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ನ ಸಬಲ್ ಕ್ಯಾಂಪಸ್ನಲ್ಲಿ ಈ ಘಟನೆ ನಡೆದಿದೆ. 11ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಹಲ್ಲೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಗುಂಡು ಹಾರಿಸಿರುವುದು ದೃಢಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಿಜವಾದ ಆಯುಧದಂತೆ ಕಾಣುವ ಆಟಿಕೆ ಪಿಸ್ತೂಲ್ನ ಹಿಂಭಾಗದಿಂದ ಸಹಪಾಠಿಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿದ್ಯಾರ್ಥಿಗಳ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಚಿಂಗ್ ಸೆಂಟರ್ನ ಭದ್ರತೆ ಬಗ್ಗೆ ಚರ್ಚೆ ನಡೆದಿದೆ. ಸಹಪಾಠಿ ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿರಬಹುದು ಎಂದು ಕೆಲವು ಪೋಸ್ಟ್ಗಳಲ್ಲಿ ಹೇಳಲಾಗಿದೆ. ಆದರೆ, ಗಲಾಟೆಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ.
ಗಾಯಗೊಂಡ ವಿದ್ಯಾರ್ಥಿಯ ತಾಯಿ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗಲಾಟೆಗೆ ಕಾರಣವೇನು ಮತ್ತು ಹಲ್ಲೆಗೆ ಬಳಸಿದ ವಸ್ತು ಯಾವುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಚಿಂಗ್ ಸಂಸ್ಥೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ದೆಹಲಿಯಲ್ಲಿ ಡಿಟಿಸಿ ಬಸ್ಗಳ ಅಟ್ಟಹಾಸ: ಭೀಕರ ಅಪಘಾತಕ್ಕೆ ಓರ್ವ ಪಾದಚಾರಿ ಬಲಿ! | Delhi Bus Accident
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಕೋಟಾಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಕೋಚಿಂಗ್ ಸೆಂಟರ್ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಈ ಘಟನೆ ಮತ್ತೊಮ್ಮೆ ಆತಂಕ ಮೂಡಿಸಿದೆ. (ಏಜೆನ್ಸೀಸ್)