ಬೀಜಿಂಗ್: ಲಡಾಖ್ನ ಪೂರ್ವಭಾಗದಲ್ಲಿ ವಾಸ್ತವ ಗಡಿರೇಖೆಯುದ್ದಕ್ಕೂ ನಿಯೋಜನೆಗೊಳಿಸಲಾಗಿದ್ದ ಸೇನೆಯನ್ನು ಭಾರತ ಮತ್ತು ಚೀನಾ ಬಹುತೇಕ ಕಡೆಗಳಿಂದ ಹಿಂಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ ಎಂದು ಚೀನಾ ಹೇಳಿದೆ.
ಮಂಗಳವಾರ ಈ ಮಾಹಿತಿ ನೀಡಿರುವ ಚೀನಾ ಉಳಿದ ವಿವಾದಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಿಲಿಟರಿ ಮಟ್ಟದ ಮಾತುಕತೆ ಮುಂದುವರಿಯಲಿದೆ. ಇದಕ್ಕಾಗಿ ಸಿದ್ಧತೆ ನಡೆಸಿರುವುದಾಗಿ ತಿಳಿಸಿದೆ.
ಗಡಿ ವ್ಯವಹಾರಗಳ ಸಲಹೆ ಮತ್ತು ಸಮನ್ವಯದ ಬಗ್ಗೆ ಕಾರ್ಯತಂತ್ರ ರೂಪಿಸುವ (ಡಬ್ಲ್ಯುಎಂಸಿಸಿ) ಕುರಿತು ಕಳೆದ ಶುಕ್ರವಾರ ಮೂರು ಗಂಟೆ ಚರ್ಚೆ ನಡೆಸಿದ ನಂತರದಲ್ಲಿ ಚೀನಾದ ವಿದೇಶಾಂಗ ಸಚಿವಾಲಯ ಗಡಿಯಲ್ಲಿ ನಿಯೋಜಿಸಿದ್ದ ಪಡೆಗಳ ಹಿಂತೆಗೆತ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದೆ. ವಾಸ್ತವ ಗಡಿರೇಖೆಯ ಬಳಿಯಲ್ಲಿ ಸದ್ಯ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿ ಕುರಿತ ಚರ್ಚೆ ಡಬ್ಲ್ಯುಎಂಸಿಸಿ ಸಭೆಯ ಮುಖ್ಯ ಕಾರ್ಯಸೂಚಿಯಾಗಿತ್ತು.
ಸೇನೆಯನ್ನು ಹಿಂಪಡೆಯುವ ವಿಷಯವಾಗಿ ಉಭಯ ರಾಷ್ಟ್ರಗಳ ಹಿರಿಯ ಮಿಲಿಟರಿ ಕಮಾಂಡರ್ಗಳ ಮಟ್ಟದಲ್ಲಿ ನಡೆದ ಮಾತುಕತೆ ಮತ್ತು ಆದ ಒಪ್ಪಂದವನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿರುವ ಭಾರತ ಮನವಿ ಮಾಡಿಕೊಂಡ ನಂತರದಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಕುರಿತು ವಿವಾದ ಏರ್ಪಟ್ಟಿತ್ತು.
ಗಲ್ವಾನ್ ಕಣಿವೆ, ಹಾಟ್ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವ್ಯಾಂಗ್ ವೆನ್ಬಿನ್, ಬಹುತೇಕ ಪ್ರದೇಶಗಳಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಚೀನಾ ಮತ್ತು ಭಾರತ ಸೇನೆ ಹಿಂತೆಗೆತದ ಕುರಿತು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳಲ್ಲಿ ಮಾತುಕತೆ ನಡೆಸಿದವು. ಕಮಾಂಡರ್ ಮಟ್ಟದ ನಾಲ್ಕು ಸುತ್ತಿನ ಮಾತುಕತೆ ಮತ್ತು ಡಬ್ಲ್ಯುಎಂಸಿಸಿಯ ಮೂರು ಸಭೆಗಳು ನಡೆದಿವೆ. ಇದೀಗ ಗಡಿಯ ಮುಂಚೂಣಿ ಭಾಗದಲ್ಲಿನ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಬಹುತೇಕ ಕಡೆಗಳಲ್ಲಿ ಪೂಣ್ಗೊಂಡಿದೆ. ತನ್ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ನಾವು ಕಮಾಂಡರ್ ಮಟ್ಟದ 5ನೇ ಸುತ್ತಿನ ಸಭೆಗೆ ಸಜ್ಜಾಗುತ್ತಿದ್ದೇವೆ. ಉಳಿದ ವಿವಾದಗಳನ್ನು ಪರಿಹರಿಸಿಕೊಳ್ಳಲು ಈ ಹಂತದಲ್ಲಿ ಪ್ರಯತ್ನಿಸಲಾಗುವುದು. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನೆಲೆಗೊಳಿಸುವ ನಿಟ್ಟಿನಲ್ಲಿ ಭಾರತ ಒಮ್ಮತಾಭಿಪ್ರಾಯವನ್ನು ಹೊಂದುವ ಮೂಲಕ ಅದನ್ನು ಅನುಷ್ಠಾನಗೊಳಿಸಲು ಮುಂದಾಗುತ್ತದೆ ಎಂಬ ವಿಶ್ವಾಸ ಇರುವುದಾಗಿ ಹೇಳಿದ್ದಾರೆ.