ನ್ಯೂಸ್

ತ್ರಿಪುರ ಸುಂದರಿ ಮಹಾಗೌರಿ

ಗಜೇಂದ್ರ ಬಾಬು
ಕಾಳಿಯ ಘೊರ ಕಪ್ಪು ಸ್ವರೂಪದಲ್ಲಿದ್ದ ದೇವಿಗೆ ಪುನಃ ತಾನು ಗೌರಿಯಾಗಬೇಕೆಂಬ ಇಚ್ಛೆಯಾಯಿತು. ಕೈಲಾಸದಲ್ಲಿ ಪತ್ನಿಯನ್ನು ಕಾಣದ ಶಿವನು ನಾರದನನ್ನು ಕುರಿತು, ‘ಭಗವತಿ ಪ್ರಸ್ತುತ ಎಲ್ಲಿ ವಾಸವಾಗಿದ್ದಾಳೆ?’ ಎಂದು ವಿಚಾರಿಸಲಾಗಿ, ಆಗ ನಾರದರು, ‘ದೇವಿಯು ಈಗ ಕಾಳಿಯ ಘೊರ ಕಪ್ಪು ಸ್ವರೂಪದಲ್ಲಿ ಸುಮೇರು ಶೃಂಗದ ಉತ್ತರದಲ್ಲಿ ಪ್ರತ್ಯಕ್ಷಳಾಗಿದ್ದಾಳೆ’ ಎಂದಾಗ, ಶಿವನು ದೇವಿಯನ್ನು ವಿವಾಹವಾಗುವ ಅಪೇಕ್ಷೆ ಹೊಂದಿರುವುದಾಗಿ ನಾರದರ ಮುಖಾಂತರ ದೇವಿಗೆ ಮಾಹಿತಿ ಮುಟ್ಟಿಸಲು ಸೂಚಿಸಿದನು.

ಶಿವನ ಇಚ್ಛೆಯನ್ನು ಕೇಳಿದ ದೇವಿಯು, ‘ನಾನು ಈಗ ಕಾಳಿಯ ಸ್ವರೂಪದಲ್ಲಿದ್ದು, ಕ್ಷುದ್ರಳಾಗಿ ಕಪ್ಪುಬಣ್ಣವುಳ್ಳವಳಾಗಿ ಶಿವನನ್ನು ವರಿಸುವುದು ಹೇಗೆ’ ಎಂಬ ಆಲೋಚನೆಯಲ್ಲಿ ಮಗ್ನಳಾಗಿದ್ದಳು. ದೇವಿಯು ಮರಳಿ ಚಿನ್ನದ ಮೈಬಣ್ಣ ಪಡೆಯಲು ಬ್ರಹ್ಮದೇವನಲ್ಲಿ ಮೊರೆ ಹೋದಾಗ, ಬ್ರಹ್ಮದೇವನು ದೇವಿಗೆ, ‘ಹಿಮಾಲಯದಲ್ಲಿ ಹರಿಯುತ್ತಿರುವ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ನಿನ್ನ ಮೈಬಣ್ಣ ಪರಿವರ್ತನೆಯಾಗುತ್ತದೆ’ ಎಂಬ ಸಲಹೆ ನೀಡಿದನು. ದೇವಿಯು ಗಂಗಾಸ್ನಾನ ಮಾಡಿದಾಗ ಅವಳ ಕಪ್ಪುಚರ್ಮವು ಸಂಪೂರ್ಣವಾಗಿ ತೊಳೆಯಲ್ಪಟ್ಟಿತು ಮತ್ತು ದೇವಿಯು ಬಿಳಿವಸ್ತ್ರಗಳನ್ನು ಧರಿಸಿ ಸುಂದರವಾದ ಚಿನ್ನದ ಮೈಬಣ್ಣವುಳ್ಳವಳಾಗಿ ತ್ರಿಪುರ ಸುಂದರಿಯಾಗಿ ಪರಿವರ್ತನೆಗೊಂಡು ಬ್ರಹ್ಮಾದಿ-ದೇವತೆಗಳ ಮಂದೆ ಪ್ರತ್ಯಕ್ಷಳಾದಳು.

ಸಂಪತ್ತು ಮತ್ತು ಸಚ್ಚಿದಾನಂದ ಸ್ವರೂಪಳಾದ ತ್ರಿಪುರ ಸುಂದರಿ ಸುವರ್ಣ ಕಾಂತಿಯುಕ್ತಳೂ, ಹಿಮಾಲಯದಂತೆ ಶ್ವೇತವರ್ಣದವಳು, ರಥವಾಹಿನಿಯಾಗಿದ್ದಾಳೆ. ಸದಾ ಹಸನ್ಮುಖಿಯು, ವರದ ಮತ್ತು ಅಭಯ ಮುದ್ರೆಗಳಿಂದ ಸುಶೋಭಿತಳಾಗಿದ್ದಾಳೆ. ನಾಲ್ಕು ತೋಳುಗಳಿಂದ ಕೂಡಿದವಳಾಗಿದ್ದು, ಶಕ್ತಿ ಮತ್ತು ಲಯದ ಸಂಕೇತಗಳಿಂದ ತ್ರಿಶೂಲ ಮತ್ತು ಡಮರುಗವನ್ನು ಹಿಡಿದಿದ್ದು, ಇನ್ನೆರಡು ಕೈಗಳಲ್ಲಿ ವರದ ಮತ್ತು ಅಭಯ ಮುದ್ರೆಗಳಲ್ಲಿ ಬ್ರಹ್ಮ ದೇವಾದಿಗಳಿಗೆ ದರ್ಶನವಿತ್ತು ಜಗತ್ತನ್ನು ರಕ್ಷಿಸಲು 16 ವಯಸ್ಸುಳ್ಳ ಕನ್ಯೆಯಾಗಿ ರೂಪಗೊಂಡಳು. ಬಿಳಿ ಹೊಳಪಿನ ನಂದಿಯನ್ನು ಏರಿ ಕನ್ಯೆಯಾಗಿ ದೇವಿಯು ಶಿವನು ವಾಸಿಸುತ್ತಿದ್ದ ಕೈಲಾಸಕ್ಕೆ ತೆರಳಿ ವಿವಾಹವಾಗಿ ಶಿವ-ಶಕ್ತಿ ಐಕ್ಯವಾಗಿ ಗಣಾಧೀಪ ಹಾಗೂ ಕಾರ್ತಿಕೇಯನೊಂದಿಗೆ ಹಾಗೂ ಶಿವಗಣಗಳೊಂದಿಗೆ ನರ್ತಿಸುತ್ತ ಲೋಕಕಲ್ಯಾಣಕ್ಕಾಗಿ ಆಶೀರ್ವದಿಸಿದ ದೇವಿಯ ರೂಪವೇ ತ್ರಿಪುರ ಸುಂದರಿ ಮಹಾಗೌರಿ. ಈಕೆ ಮಾತೃಶಕ್ತಿಯಾಗಿದ್ದು ದುರ್ಗಾ, ಪಾರ್ವತಿ, ಕಾಳಿ ಮತ್ತು ಇತರ ರೂಪಗಳಲ್ಲಿ ಪ್ರತ್ಯಕ್ಷಳಾಗಿ ಜಗತ್ತನ್ನು ಹಾಗೂ ಭಕ್ತರನ್ನು ಕಾಪಾಡುತ್ತಿದ್ದಾಳೆ.

ದೇವಿಯ ದೈವಿಕ ಗುಣಗಳೊಂದಿಗೆ ಸಂಪರ್ಕ ಸಾಧಿಸಲು, ಅವಳ ಅನುಗ್ರಹ ಪಡೆಯಲು, ಆಂತರಿಕ ಶಾಂತಿ ಮತ್ತು ನಮ್ಮ ಜೀವನದಲ್ಲಿ ಸ್ಪಷ್ಟತೆ ರೂಪಿಸಿಕೊಳ್ಳಲು ಈ ದಿನ ದೇವಿ ಗೌರಿಯ ಆರಾಧನೆ ಅತ್ಯಾವಶ್ಯಕ.

ದಿನದ ಬಣ್ಣ: ಗುಲಾಬಿ ಮಂತ್ರ: ಓಂ ದೇವಿ ಮಹಾ ಗೌರಿಯೈ ನಮಃ ನೈವೇದ್ಯ: ತೆಂಗಿನಕಾಯಿಯ ಬಗೆಬಗೆಯ ಸಿಹಿತಿನಿಸುಗಳು ಫಲ: ಅವಿವಾಹಿತ ಹೆಣ್ಣುಮಕ್ಕಳಿಗೆ ಶೀಘ್ರ ವಿವಾಹ

(ಲೇಖಕರು ಜ್ಯೋತಿಷಿ ಹಾಗೂ ವಾಸ್ತುತಜ್ಞರು)