ನ್ಯೂಸ್

ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಹಣಾಹಣಿ; ಜಿಲ್ಲೆಯಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ಡಾ.ಕೆ.ಸುಧಾಕರ್; ಕಾಂಗ್ರೆಸ್-ಜೆಡಿಎಸ್ ಪ್ರಬಲ ಪೈಪೋಟಿ

Webdesk - Ravikanth

| ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್-ಜೆಡಿಎಸ್ ನಡುವಿನ ಹಣಾಹಣಿ ವಾತಾವರಣ ಈ ಬಾರಿ ಬದಲಾಗಿದೆ. ಬಿಜೆಪಿಯ ಪೈಪೋಟಿಯಿಂದ ತ್ರಿಕೋನ ಸ್ಪರ್ಧೆಯಾಗಿ ಪರಿವರ್ತನೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಜೆಡಿಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಆದರೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸುತ್ತಿದ್ದಂತೆ ಕೇಸರಿ ಪಾಳಯದ ಗಟ್ಟಿತನವು ಇತರ ಕ್ಷೇತ್ರಗಳಿಗೆ ಹಬ್ಬಿದೆ. ಸಮಾಜ ಸೇವಕರು, ಉದ್ಯಮಿಗಳ ವಲಸೆಯಿಂದ ಪಕ್ಷದ ಬುನಾದಿ ಭದ್ರವಾಗುತ್ತಿದೆ. ಹೊಸ ಮುಖಗಳ ಪರಿಚಯವು ದುರ್ಬಲ ಸಂಘಟನೆಯಿಂದ ಪ್ರಾಬಲ್ಯ ಮೆರೆಯುವುದರ ಕಡೆಗೆ ಸಾಗುವಂತಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 3, ಜೆಡಿಎಸ್ 1, 2019ರ ಉಪ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕರು ಆಯ್ಕೆಯಾಗಿದ್ದರು. ಈ ಬಾರಿಯ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳ ಪೈಪೋಟಿ ಜತೆಗೆ ಪಕ್ಷೇತರ ಅಭ್ಯರ್ಥಿ ಕೂಡ ಗೆಲುವಿಗಾಗಿ ಸೆಣೆಸಾಡುತ್ತಿದ್ದಾರೆ.

ಚಿಂತಾಮಣಿಯಲ್ಲಿ ಹಾಲಿ, ಮಾಜಿಗಳ ಕದನ

ಚಿಂತಾಮಣಿಯಲ್ಲಿ ಕಾಂಗ್ರೆಸ್​ನ ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ಮತ್ತು ಜೆಡಿಎಸ್​ನ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ ನಡುವೆ ನೇರ ಹಣಾಹಣಿಯಿಂದ ದ್ವಿಕೋನ ಸ್ಪರ್ಧೆ ಇದ್ದರೂ ಕೈ ಪಾಳಯ ಮುಂದಿದೆ. ಬಿಜೆಪಿ ಅಭ್ಯರ್ಥಿಯಾದ ಜಿ.ಎನ್.ವೇಣುಗೋಪಾಲ್ ಚುನಾವಣಾ ಸನಿಹದಲ್ಲಿ ಪ್ರಚಾರದ ಕಸರತ್ತು ಪ್ರಾರಂಭಿಸಿದ್ದು, ಮತಗಳಿಕೆ ಹೆಚ್ಚಳವೇ ದೊಡ್ಡ ಸಾಧನೆ ಎನ್ನುವಂತಾಗಿದೆ.

ಮೆಡಿಕಲ್ ಮಿನಿಸ್ಟರ್ ಮೆಡಿಕಲ್ ಮೇಷ್ಟ್ರು

ರಾಜ್ಯ ಸರ್ಕಾರದ ಪ್ರಭಾವಿ ಸಚಿವ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಹೊಂದಿರುವ ಡಾ.ಕೆ.ಸುಧಾಕರ್ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಹೈವೋಲ್ಟೇಜ್ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಡಾ.ಕೆ.ಸುಧಾಕರ್ (2013, 2018ರಲ್ಲಿ ಕಾಂಗ್ರೆಸ್ ಶಾಸಕರಾಗಿ, 2019ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆ) 4ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವೈಯಕ್ತಿಕ ವರ್ಚಸ್ಸು, ಕಾರ್ಯಕರ್ತರ ಸಂಘಟನೆ, ಅಭಿವೃದ್ಧಿ ಕೆಲಸಗಳ ಮೂಲಕ ಮುಂಚೂಣಿಯಲ್ಲಿದ್ದಾರೆ. ಭದ್ರಕೋಟೆಯನ್ನು ಸುಲಭವಾಗಿ ಬಿಟ್ಟು ಕೊಡದಿರಲು ಕಾಂಗ್ರೆಸ್, ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಪ್ರದೀಪ್ ಈಶ್ವರ್​ರನ್ನು ಕಣಕ್ಕಿಳಿಸಿದೆ. ಮೆಡಿಕಲ್ ಮಿನಿಸ್ಟರ್ ಮತ್ತು ಮೆಡಿಕಲ್ ಮೇಷ್ಟ್ರು ಎಂಬ ಸ್ಲೋಗನ್ ಅಬ್ಬರಿಸುತ್ತಿದೆ. ಒಮ್ಮೆ ಗೆಲುವು, 2 ಸೋಲು ಕಂಡಿರುವ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್ ಅಭ್ಯರ್ಥಿ. ಒಕ್ಕಲಿಗ ಪ್ರಾಬಲ್ಯ, ಅನುಕಂಪದ ಅಲೆ, ಕುಮಾರಸ್ವಾಮಿ ಕೊಡುಗೆ, ಯೋಜನೆಗಳು ಪ್ರಚಾರ ಸರಕಾಗಿದ್ದು, ಕ್ಷೇತ್ರದಲ್ಲಿ ಮೂವರ ಪೈಪೋಟಿಯಿಂದ ತ್ರಿಕೋನ ಸ್ಪರ್ಧೆಯ ವಾತಾವರಣ ಇದ್ದರೂ, ಡಾ. ಸುಧಾಕರ್ ಗಮನ ಸೆಳೆದಿದ್ದಾರೆ.

ಶಿಡ್ಲಘಟ್ಟದಲ್ಲಿ ದಳ-ಕೈ ಹೋರಾಟ

ಹೈಟೆಕ್ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್, ಕಾಂಗ್ರೆಸ್​ನ ರಾಜೀವ್​ಗೌಡ ಹೋರಾಟವು ಗಮನ ಸೆಳೆಯುತ್ತಿದೆ. ಇಲ್ಲಿ ಕೈ ಪಾಳಯಕ್ಕೆ ಪುಟ್ಟು ಆಂಜಿನಪ್ಪ (ಬಂಡಾಯ ಕಾಂಗ್ರೆಸ್ ಅಭ್ಯರ್ಥಿ) ಸ್ಪರ್ಧೆಯು ದೊಡ್ಡ ತಲೆನೋವಾಗಿದೆ. ಉದ್ಯಮಿ ಸೀಕಲ್ ರಾಮಚಂದ್ರಗೌಡ ಬಿಜೆಪಿ ಅಭ್ಯರ್ಥಿಯಾಗಿ ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿದಿದ್ದಾರೆ.

ಸಮಾಜ ಸೇವಕರ ಆರ್ಭಟ

ಗೌರಿಬಿದನೂರು ಕ್ಷೇತ್ರದಲ್ಲಿ ಸಮಾಜ ಸೇವಕರ ಆರ್ಭಟವು ರಾಜಕೀಯ ಅನಿರೀಕ್ಷಿತ ಬದಲಾವಣೆಗಳಿಗೆ ಪೂರಕವಾಗಿ ಕಂಡು ಬರುತ್ತಿದೆ. ಸತತ 5 ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್​ನ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ 6ನೇ ಬಾರಿ ಕಣಕ್ಕಿಳಿದಿದ್ದಾರೆ. ವೋಟ್ ಬ್ಯಾಂಕ್​ಗೆ ಅನ್ಯರಿಂದ ಕನ್ನ, ಚದುರಿಹೋದ ನಾಯಕರು, ಎದುರಾಳಿಗಳ ಸಮಾಜ ಸೇವೆಯ ಪೈಪೋಟಿಯು ಕೈ ವಿಜಯಮಾಲೆ ಕಸಿದುಕೊಳ್ಳುವ ಆತಂಕ ಕಾಡುತ್ತಿದೆ. ಪಕ್ಷೇತರ ಅಭ್ಯರ್ಥಿ ಕೆ.ಎಚ್. ಪುಟ್ಟಸ್ವಾಮಿಗೌಡ ಸಾಮಾಜಿಕ ಚಟುವಟಿಕೆಯ ಮೂಲಕ ಅಲೆ ಸೃಷ್ಟಿಸಿಕೊಂಡಿದ್ದಾರೆ. ಉಳಿದಂತೆ ಜೆಡಿಎಸ್​ನ ಸಿ.ಆರ್. ನರಸಿಂಹಮೂರ್ತಿ, ಬಿಜೆಪಿಯ ಎಚ್.ಎಸ್.ಶಶಿಧರ್, ಪಕ್ಷೇತರ ಅಭ್ಯರ್ಥಿ ಕೆಂಪರಾಜು ಚುನಾವಣಾ ಪೈಪೋಟಿಗೆ ಕಸರತ್ತು ನಡೆಸುತ್ತಿದ್ದಾರೆ.

ಸಿಪಿಎಂ-ಕಾಂಗ್ರೆಸ್ ಜಿದ್ದಾಜಿದ್ದಿ

ರಾಜ್ಯದಲ್ಲಿ ಸಿಪಿಎಂ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಮತ್ತು ಹಿಂದುಳಿದ ಕ್ಷೇತ್ರ ಬಾಗೇಪಲ್ಲಿ. ಡಾ. ಅನಿಲ್ ಕುಮಾರ್ ಸಿಪಿಎಂ ಅಭ್ಯರ್ಥಿ. ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನದ ಹಿನ್ನೆಲೆಯಲ್ಲಿ ಮಾರ್ಕ್ಸ್​ವಾದಿ ಪಕ್ಷವು ಹೋಳಾಗಿದೆ. ಈ ಪಕ್ಷಕ್ಕೆ ಜೆಡಿಎಸ್ ಕೂಡ ಬೆಂಬಲ ಘೊಷಿಸಿ, ಅಭ್ಯರ್ಥಿಯಾಗಿದ್ದ ಡಿ.ಜೆ.ನಾಗರಾಜರೆಡ್ಡಿಯನ್ನು ಕಣದಿಂದ ನಿವೃತ್ತಿಗೊಳಿಸಿದೆ. ಎರಡು ಬಾರಿ ಗೆಲುವು ಕಂಡಿರುವ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಪ್ರಾಬಲ್ಯ ಹೊಂದಿರದ ಕ್ಷೇತ್ರಕ್ಕೆ ಬೆಂಗಳೂರು ವರ್ತಲ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಬಂದು ಸಮಾಜಸೇವೆ ಮೂಲಕ ಗಮನ ಸೆಳೆದಿದ್ದು, ಮೊದಲ ಬಾರಿಗೆ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯ ಸವಾಲನ್ನೊಡ್ಡುತ್ತಿದ್ದಾರೆ.