ನ್ಯೂಸ್

ರಾಷ್ಟ್ರದ ರಾಜಧಾನಿಯನ್ನು ನಡುಗಿಸಿದ ಭೂಕಂಪ; ರಿಕ್ಟರ್ ಮಾಪಕದಲ್ಲಿ ತೀವ್ರತೆ 5.8 ದಾಖಲು

ನವದೆಹಲಿ: ಇಂದು ರಾತ್ರಿಯ ಸುಮಾರಿಗೆ ಸಂಭವಿಸಿದ ಭೂಕಂಪ ರಾಷ್ಟ್ರದ ರಾಜಧಾನಿಯನ್ನು ನಡುಗಿಸಿದೆ. ಪರಿಣಾಮವಾಗಿ ದೆಹಲಿಯ ಪ್ರಮುಖ ಭಾಗದ ಜನರು ನಿದ್ದೆಗೆಡುವಂತಾಗಿದೆ. ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ- ಎನ್​ಸಿಎಸ್​) ಮಾಹಿತಿ ನೀಡಿದೆ.

ರಾತ್ರಿ ಸುಮಾರು 9.30ರ ಸಮಯದಲ್ಲಿ ಈ ಭೂಕಂಪ ಸಂಭವಿಸಿದ್ದು, ದೆಹಲಿಯ ಎನ್​ಸಿಆರ್​, ಜಮ್ಮು-ಕಾಶ್ಮೀರ ಹಾಗೂ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಭಾಗಗಳಲ್ಲಿ ಕಂಪನ ಉಂಟಾಗಿದೆ. ಅಫ್ಘಾನಿಸ್ತಾನ ಭೂಕಂಪದ ಕೇಂದ್ರಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.8 ದಾಖಲಾಗಿದೆ.

ಇಂದು ಬೆಳಗ್ಗೆ ಜಮ್ಮು-ಕಾಶ್ಮೀರದಲ್ಲೂ ಭೂಕಂಪ ಉಂಟಾಗಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2 ದಾಖಲಾಗಿತ್ತು. ಭೂಮಿಯ 129 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿತ್ತು ಎಂದು ಎನ್​ಸಿಎಸ್​ ತಿಳಿಸಿದೆ. ಬೆಳಗಿನ ಈ ಭೂಕಂಪದಲ್ಲಿ ಯಾವುದೇ ಸಾವು-ನೋವು ವರದಿ ಆಗಿಲ್ಲ. ರಾತ್ರಿ ಸಂಭವಿಸಿದ ಭೂಕಂಪದ ಪರಿಣಾಮದ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.