ನ್ಯೂಸ್

ಇ-ಸಂಜೀವಿನಿ ಆಪ್ ಮೂಲಕ ಚಿಕಿತ್ಸೆ; ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ರಾಜ್ಯ ಪ್ರಥಮ

Webdesk - Manjunatha B

ಪಂಕಜ ಕೆ.ಎಂ. ಬೆಂಗಳೂರು

ಆಸ್ಪತ್ರೆಗೆ ಹೋದರೆ ಗಂಟೆಗಟ್ಟಲೆ ಕಾಯುತ್ತ್ತಾ, ಕನ್ಸಲ್ಟೇಶನ್ ಹೆಸರಿನಲ್ಲಿ 500-1000 ಪಾವತಿಸಿ ಚಿಕಿತ್ಸೆ ಪಡೆಯಬೇಕೆನ್ನುವ ಬಹುತೇಕರು ಸಮಸ್ಯೆಗಳನ್ನು ನಿರ್ಲಕ್ಷಿಸುವುದೇ ಹೆಚ್ಚು. ಆದರೆ ಈಗ ಅಂತಹ ಸಮಸ್ಯೆ ಇಲ್ಲದೆ ಯಾವುದೇ ರೀತಿಯ ಅನಾರೋಗ್ಯ ಕಂಡುಬಂದಲ್ಲಿ ಮನೆಯಿಂದಲೇ ವೈದ್ಯರನ್ನು ಸಂರ್ಪಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ ಮೊಬೈಲ್​ನಲ್ಲಿ ‘ಇ-ಸಂಜೀವಿನಿ’ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಭೌತಿಕವಾಗಿ ಸಂರ್ಪಸಲು ಸಾಧ್ಯವಾಗದಿದ್ದಾಗ ಕಚೇರಿ ಕೆಲಸ ಸೇರಿ ಎಲ್ಲವೂ ಆನ್​ಲೈನ್ ಮೂಲಕವೇ ನಡೆಯುತ್ತಿತ್ತು. ಇದಕ್ಕೆ ವೈದ್ಯಕೀಯ ಕ್ಷೇತ್ರವೂ ಹೊರತಲ್ಲ. ಆಗ ಪರಿಸ್ಥಿತಿ ಮನಗಂಡು ಕೇಂದ್ರ ಸರ್ಕಾರ ‘ಇ-ಸಂಜೀವಿನಿ ಒಪಿಡಿ’ ಆನ್​ಲೈನ್ ವೈದ್ಯಕೀಯ ಸೇವೆ ಪ್ರಾರಂಭಿಸಿತು. ಈಗ ಇದು ಮನೆ ಮಾತಾಗಿದೆ. ದೇಶಾದ್ಯಂತ ಕೋಟ್ಯಂತರ ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಇ-ಸಂಜೀವಿನಿ ಒಪಿಡಿ ಸೌಲಭ್ಯದಡಿ ಸೇವೆ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈವರೆಗೂ 45,61,986 ಮಂದಿ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇಮ ಕೇಂದ್ರದ ಸೇವೆಯಲ್ಲಿ 5ನೇ ಸ್ಥಾನದಲ್ಲಿದೆ. 1,86,43,191 ಸೇರಿ ರಾಜ್ಯದಲ್ಲಿ 2,32,05,177 ರೋಗಿಗಳು ವೈದ್ಯಕೀಯ ಸೌಲಭ್ಯ ಪಡೆದುಕೊಂಡಿದ್ದಾರೆ.

ಉಚಿತ ಸೇವೆ ಕಲ್ಪಿಸುವ ವೇದಿಕೆ: ಇ-ಸಂಜೀವಿನಿ ಎಂದರೆ ಅಂತರ್ಜಾಲ ಆಧಾರಿತ ಉಚಿತ ವೈದ್ಯಕೀಯ ಸೇವೆ ಕಲ್ಪಿಸುವ ವೇದಿಕೆ. ಇದರಲ್ಲಿ ಎರಡು ವಿಧ ಇದೆ. ಒಂದು ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇಮ ಕೇಂದ್ರ (ಎಬಿ-ಎಚ್​ಡಬ್ಲ್ಯೂಸಿ)ಕ್ಕೆ ಭೇಟಿ ನೀಡುವ ರೋಗಿಗೆ ವೈದ್ಯರು ನುರಿತ ತಜ್ಞರೊಂದಿಗೆ ಸಮಾಲೋಚಿಸಿ ಚಿಕಿತ್ಸೆ ನೀಡುವ ವಿಧಾನ. ಮತ್ತೊಂದು ಇ-ಸಂಜೀವಿನಿ ಒಪಿಡಿ ಅಂದರೆ ರೋಗಿಯು ತನ್ನ ಐಒಎಸ್ ಆಧಾರಿತ ಹಾಗೂ ಆಂಡ್ರಾಡ್ ಮೊಬೈಲ್ ಮೂಲಕ ಇ-ಸಂಜೀವಿನಿ ಆಪ್​ಗೆ ಲಾಗ್ ಇನ್ ಆಗಿ ಅದರ ಮೂಲಕ ಹೆಸರು ನೋಂದಾಯಿಸಿಕೊಂಡರೆ ಎಸ್​ಎಂಎಸ್, ಕರೆ ಹಾಗೂ ವಿಡಿಯೋ ಕಾಲ್ ಮೂಲಕ ನೇರವಾಗಿ ತಜ್ಞರೊಂದಿಗೆ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಬಹುದಾಗಿದೆ.

ಕಮಾಂಡ್ ಸೆಂಟರ್ ಸ್ಥಾಪನೆ ಚಿಂತನೆ: ‘ಇ-ಸಂಜೀವಿನಿ’ ಸೇವೆಯನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯು ‘ಕಮಾಂಡ್ ಸೆಂಟರ್’ಸ್ಥಾಪನೆಗೆ ಚಿಂತಿಸಿದೆ. ವಲಯವಾರು ಕೇಂದ್ರ ಸ್ಥಳಗಳಲ್ಲಿ ಕಮಾಂಡ್ ಸೆಂಟರ್ ತೆರೆದು ಅದರಲ್ಲಿ ಅಗತ್ಯ ಇರುವ ನುರಿತ ತಜ್ಞರನ್ನು ನಿಯೋಜಿಸಿ 24/7 ಸೇವೆ ಒದಗಿಸುವುದು. ಇದರಿಂದ ಜನರು ಇರುವಲ್ಲಿಯೇ ಹಣ ಹಾಗೂ ಸಮಯ ವ್ಯಯಿಸದೆ ವೈದ್ಯಕೀಯ ಸೇವೆ ಹಾಗೂ ಸಲಹೆ ಪಡೆಯಬಹುದಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ದೊರೆತ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೇವೆ ಪಡೆಯುವ ವಿಧಾನ: ಮೊದಲಿಗೆ ಇ-ಸಂಜೀವಿನಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದರ ಮೂಲಕ ರೋಗಿಗಳು ಹೆಸರು ನೋಂದಾಯಿಸಬೇಕು. ಬಳಿಕ ಟೋಕನ್ ಜನರೇಟ್ ಆಗಲಿದ್ದು, ಸರತಿಯಂತೆ ಸೇವೆ ದೊರೆಯಲಿದೆ. ನಂತರ ವೈದ್ಯರೊಂದಿಗೆ ಆಡಿಯೋ-ವಿಡಿಯೋ ಮೂಲಕ ಸಮಾಲೋಚಿಸಬಹುದಾಗಿದೆ. ನಂತರ ಮೊಬೈಲ್​ಗೆ ಔಷಧ ಹಾಗೂ ಹೆಚ್ಚಿನ ಚಿಕಿತ್ಸೆ ಪಡೆಯುವ ಕುರಿತು ಸೂಚನೆ ಬರಲಿದೆ. ಈ ಸಂದೇಶ ತೋರಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಹಾಗೂ ಸರ್ಕಾರಿ ಔಷಧಾಲಯಗಳಲ್ಲಿ ಉಚಿತವಾಗಿ ಔಷಧ ಪಡೆಯಬಹುದಾಗಿದೆ.