supreme court 
ನ್ಯೂಸ್

ವಿವಾದದ ಸುಳಿಯಲ್ಲಿ ದೇಶದ್ರೋಹ ಕಾನೂನು

ದೇಶದ್ರೋಹ ಕಾನೂನಿನ ಮರುಪರಿಶೀಲನೆಗೆ ಕೇಂದ್ರ ಮುಂದಾಗಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೂ ಸೆಕ್ಷನ್ 124ಎ ಅಡಿ ಹೊಸ ಪ್ರಕರಣ ದಾಖಲಿದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮೂಲಕ ದೇಶದ್ರೋಹ ಕಾನೂನು ರದ್ದುಮಾಡಬೇಕು ಎಂಬ ಆಗ್ರಹವೂ ಜೋರಾಗಿದೆ. ಈ ಬೆಳವಣಿಗೆಗಳ ವಿವರ ಇಲ್ಲಿದೆ.

ಸೆಕ್ಷನ್ 124ಎ

ದೇಶದ್ರೋಹ ಎಂದರೆ ಏನು ಎಂಬುದನ್ನು ಸೆಕ್ಷನ್ 124ಎ ವಿವರಿಸುತ್ತದೆ. ಸರ್ಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವ ಪ್ರಯತ್ನಗಳು ದೇಶದ್ರೋಹ ಪ್ರಕರಣದಡಿ ಬರುತ್ತವೆ. ಯಾವುದೇ ವ್ಯಕ್ತಿಯು ಮಾತು, ಬರವಣಿಗೆ ಅಥವಾ ಸಂಕೇತಗಳ ಮೂಲಕ ಸರ್ಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಹುಟ್ಟಿಸಲು ಯತ್ನಿಸಿದರೆ ಅಥವಾ ಪ್ರಚೋದಿಸಿದರೆ ಅದು ದೇಶದ್ರೋಹ ಎನಿಸಿಕೊಳ್ಳುತ್ತದೆ. ದೇಶದ್ರೋಹದಡಿ ದಾಖಲಾಗುವ ಪ್ರಕರಣ ಜಾಮೀನುರಹಿತ ಅಪರಾಧವಾಗಿದೆ. ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ, ಗಂಭೀರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಭಾರತ, ಅಮೆರಿಕ, ಜರ್ಮನಿ, ಸೌದಿ ಅರೇಬಿಯಾ, ಮಲೇಷ್ಯಾ, ಇರಾನ್, ಉಜ್ಬೇಕಿಸ್ತಾನ, ಸುಡಾನ, ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ದೇಶದ್ರೋಹ ಸಂಬಂಧ ಕಾನೂನು ಜಾರಿಯಲ್ಲಿದೆ.

ಕಾನೂನು ಆಯೋಗ ಹೇಳೋದೇನು..?

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇಜವಾಬ್ದಾರಿಯಿಂದ ಬಳಸಿದ ಪ್ರತಿಯೊಂದೂ ಪ್ರಕರಣವನ್ನು ದೇಶದ್ರೋಹ ಎನ್ನಲಾಗದು. ಸರ್ಕಾರದ ನೀತಿಯೊಂದಿಗೆ ಸಮರಸವಿಲ್ಲದ ಅಭಿವ್ಯಕ್ತಿಯನ್ನು ದೇಶದ್ರೋಹ ಎಂದು ಹೇಳಲು ಸಾಧ್ಯವಿಲ್ಲ. ದೇಶದ ಪರಿಸ್ಥಿತಿಯ ಕುರಿತ ಹತಾಶೆಯ ಅಭಿವ್ಯಕ್ತಿ ಕೂಡ ದೇಶದ್ರೋಹವಲ್ಲ. ದೇಶದಲ್ಲಿ ಸಕಾರಾತ್ಮಕ ವಿಮರ್ಶೆಗೆ ಅವಕಾಶ ಇಲ್ಲದಿದ್ದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರಕ್ಕೆ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ದೇಶದಲ್ಲಿ ಒಗ್ಗಟ್ಟಿನ ರಕ್ಷಣೆ ಅಗತ್ಯ. ಆದರೆ, ಅದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ರೀತಿಯಲ್ಲಿ ದುರ್ಬಳಕೆ ಆಗಬಾರದು.

(2018ರ ವರದಿಯಲ್ಲಿ ಹೇಳಿದ್ದು)

ಬ್ರಿಟಿಷರ ಕಾಲದಿಂದ ಇದೆ

ಭಾರತೀಯ ದಂಡ ಸಂಹಿತೆ ಜಾರಿಗೆ ಬಂದಿದ್ದು 1862ರಲ್ಲಿ. ಆಗ ಅದರಲ್ಲಿ ದೇಶದ್ರೋಹದ ಸೆಕ್ಷನ್ ಇರಲಿಲ್ಲ. ಇದನ್ನು 1870ರಲ್ಲಿ ಸೇರ್ಪಡೆಗೊಳಿಸಲಾಯಿತಲ್ಲದೆ, ಮೊದಲ ಪ್ರಕರಣ 1891ರಲ್ಲಿ ಪತ್ರಕರ್ತ ಜೋಗೇಂದ್ರ ಚಂದ್ರ ಬೋಸ್ ವಿರುದ್ಧ ದಾಖಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ, ಗಾಂಧೀಜಿ, ಜವಾಹರ ಲಾಲ್ ನೆಹರು, ವೀರ ಸಾವರ್ಕರ್ ಸೇರಿ ಹಲವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ದೇಶದ್ರೋಹ ಮೇಲಿನ ಸುಪ್ರೀಂಕೋರ್ಟ್ ಆದೇಶವು ಐಪಿಸಿ ಸೆಕ್ಷನ್ 124ಅನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಅಲ್ಲದೆ ಎಫ್​ಐಆರ್ ದಾಖಲಿಸುವುದನ್ನು ಅಥವಾ ತನಿಖೆಯನ್ನು ಮುಂದುವರಿಸುವುದನ್ನು ತಡೆಯಲು ಅಥವಾ ನ್ಯಾಯಾಲಯದಿಂದ ಮುಂದಿನ ಆದೇಶ ಬರುವ ತನಕ ಬಂಧನದಂಥ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಸೆಕ್ಷನ್ 124ಎ ಅಡಿಯಲ್ಲಿ ಯಾವುದೇ ಹೊಸ ಪ್ರಕರಣಗಳ ಸಂದರ್ಭದಲ್ಲಿ ಜಾಮೀನು ಅರ್ಜಿಗಳನ್ನು ಪರೀಕ್ಷಿಸಲು ಕೆಳ ನ್ಯಾಯಾಲಯಗಳಿಗೆ ಅವಕಾಶ ನೀಡಲಾಗಿದೆ. ಆದರೆ, ನಕ್ಸಲ್ ಪ್ರಕರಣಗಳಂತಹ ಅನೇಕ ಪ್ರಕರಣಗಳಿದ್ದು, ಅಲ್ಲಿ ಐಪಿಸಿ ಮತ್ತು ಯುಎಪಿಎ ಕಾನೂನಿನ ಇತರ ನಿಬಂಧನೆಗಳನ್ನು ಸಹ ಅನ್ವಯಿಸಲಾಗುತ್ತದೆ ಮತ್ತು ಈ ಆದೇಶವು ಅಂತಹ ವಿಷಯಗಳಲ್ಲಿ ಆರೋಪಿಯ ನೆರವಿಗೆ ಬರುವುದಿಲ್ಲ. ಇದಲ್ಲದೆ ಐಪಿಸಿ ಸೆಕ್ಷನ್ 121 ಅಡಿಯಲ್ಲಿ ತನಿಖೆ ಎದುರಿಸುತ್ತಿರುವ ಅಥವಾ ಭಾರತದ ವಿರುದ್ಧ ಯುದ್ಧ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೂ ಈ ಆದೇಶ ಸಹಾಯಕ್ಕೆ ಬರುವುದಿಲ್ಲ. | ನಿಶಾಂತ್ ಪಾಟೀಲ್ ಸುಪ್ರೀಂ ಕೋರ್ಟ್ ವಕೀಲರು ಸೆಕ್ಷನ್ 124ಎ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ನೀಡಿರುವುದು ಮಧ್ಯಂತರ ಆದೇಶ ವಷ್ಟೇ. ಕೇಂದ್ರ ಸರ್ಕಾರವೇ ಮುಂದೆ ಬಂದು ಈ ಕಾನೂನನ್ನು ಪುನರ್ ಪರಿಶೀಲಿಸುತ್ತಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ. ಮುಂದಿನ ಆದೇಶದವರೆಗೆ ಈ ಸೆಕ್ಷನ್ ಅಡಿಯಲ್ಲಿ ಹೊಸ ಕೇಸ್ ದಾಖಲಿಸಕೂಡದು, ಬಾಕಿ ಇರುವ ಪ್ರಕರಣಗಳ ವಿಚಾರಣೆ ತಡೆಹಿಡಿಯಬೇಕು ಎಂದು ಕೋರ್ಟ್ ಹೇಳಿದೆ. ಯಾರ ವಿರುದ್ಧವಾದರೂ ಹೊಸ ಪ್ರಕರಣ ದಾಖಲಾದರೆ ಅವರು ನ್ಯಾಯಾಲಯದಲ್ಲಿ ಸಮಂಜಸವಾದ ಪರಿಹಾರ ಕೋರಬಹುದು ಎಂದು ಸೂಚಿಸಲಾಗಿದೆ. ಅರ್ಥಾತ್, ಹೊಸ ಪ್ರಕರಣ ದಾಖಲಾದರೆ ಹೈಕೋರ್ಟಿನ ಮೊರೆ ಹೋಗಬಹುದು. | ರಾಘವೇಂದ್ರ ಶ್ರೀವತ್ಸ ಸುಪ್ರೀಂ ಕೋರ್ಟ್ ವಕೀಲರು

ಆರೋಪಿಗಳ ಸಂಖ್ಯೆ ಏರಿಕೆ: 2010ರಿಂದ 2021ರ ಅವಧಿಯಲ್ಲಿ 13306 ಜನರ ಮೇಲೆ ದೇಶದ್ರೋಹ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಎನ್​ಡಿಎ ಅವಧಿಯಲ್ಲಿ ಶೇ.70 ಆರೋಪಿಗಳು ಜೈಲು ಸೇರಿದ್ದಾರೆ. ಯುಪಿಎ-2 ಅವಧಿಯಲ್ಲಿ 3,988 ಹಾಗೂ ಎನ್​ಡಿಎ ಅವಧಿಯಲ್ಲಿ 9,318 ಜನರ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನಿದರ್ಶನಗಳು
  • ಏ. 2022: ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ನಿವಾಸದೆದುರು ಹನುಮಾನ್ ಚಾಲೀಸಾ ಪಠಣ ಮಾಡಿದ್ದಕ್ಕೆ ಸಂಸತ್ ಸದಸ್ಯೆ ನವನೀತ್ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ವಿರುದ್ಧ ದೇಶದ್ರೋಹದ ಪ್ರಕರಣ.
  • ಫೆ. 2022: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ದೇಶದ್ರೋಹಿ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಎಸ್​ಪಿ-ಆರ್​ಎಲ್​ಡಿ ಅಭ್ಯರ್ಥಿ ಡಾ.ನೀರಜ್ ಚೌಧರಿ ವಿರುದ್ಧ ಪ್ರಕರಣ.
  • ಫೆ. 2022: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಂಬದ್ಧ ಟೀಕೆ ಮಾಡಿದ ಕಾಂಗ್ರೆಸ್ ಮುಖಂಡ ಅಜಯ್ ರಾಯ್ ವಿರುದ್ಧ ಪ್ರಕರಣ ದಾಖಲು.
  • ಜೂ. 2021: ‘ಕೋವಿಡ್​ನ್ನು ಕೇಂದ್ರ ಸರ್ಕಾರ ಲಕ್ಷದ್ವೀಪ ಜನರ ವಿರುದ್ಧ ಜೈವಿಕ ಅಸ್ತ್ರವಾಗಿ ಬಳಸುತ್ತಿದೆ’ ಎಂದು ಆರೋ ಪಿಸಿದ ಚಿತ್ರ ನಿರ್ಮಾಪಕಿ ಐಶಾ ಸುಲ್ತಾನಾ ವಿರುದ್ಧ ಪ್ರಕರಣ.
  • ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಒಳಗಾದವರ ಸಂಖ್ಯೆ ತೀರಾ ಕಡಿಮೆ. 13 ಸಾವಿರಕ್ಕೂ ಅಧಿಕ ಆರೋಪಿಗಳ ಪೈಕಿ ತಪ್ಪಿತಸ್ಥರು ಎಂದು ಸಾಬೀತಾದವರು ಕೇವಲ 13 ಮಂದಿ. ಅಂದರೆ, ಶಿಕ್ಷೆ ಪ್ರಮಾಣ ಶೇ.0.1ಕ್ಕಿಂತ ಕಡಿಮೆ.