ನ್ಯೂಸ್

ಘಾಟ್‌ನಲ್ಲಿ ಬಸ್​ ಪಲ್ಟಿ! ಇಬ್ಬರು ದುರ್ಮರಣ, 55 ಜನರಿಗೆ ಗಂಭೀರ ಗಾಯ

ರಾಯಗಢ, ಮಹಾರಾಷ್ಟ್ರ: ಶನಿವಾರ (ಡಿ.30) ಬೆಳಗ್ಗೆ 7.30ರ ಸುಮಾರಿಗೆ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 55 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಮಂಗಾವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಗಡದ ತಮ್ಹಾನಿ ಘಾಟ್ ಪ್ರದೇಶದಲ್ಲಿ ವರದಿಯಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಬಸ್ ತಮ್ಹಾನಿ ಘಾಟ್‌ನ ಗುಡ್ಡಗಾಡು ಪ್ರದೇಶದಲ್ಲಿ ಪಲ್ಟಿಯಾಗಿರುವುದನ್ನು ಪರಿಶೀಲಿಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ಸದ್ಯದ ಮಟ್ಟಿಗೆ ತಿಳಿದುಬಂದಿಲ್ಲ. ಘಾಟ್​ ರಸ್ತೆ ಆದ ಕಾರಣ ತಿರುವುಗಳಲ್ಲಿ ಚಾಲಕರು ನಿಯಂತ್ರಣ ಕಳೆದುಕೊಳ್ಳುತ್ತಿರುವ ಹಿನ್ನೆಲೆ ಈ ರೀತಿಯ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಇಂತಹ ಅಪಘಾತ ಸಂಭವಿಸಿರುವುದು ಇದೇ ಮೊದಲಲ್ಲ. ಏಪ್ರಿಲ್ 2023 ರಲ್ಲಿ, 42 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ 300 ಅಡಿ ಕಮರಿಗೆ ಬಿದ್ದಿತು. ಐವರು ಅಪ್ರಾಪ್ತರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದರು ಮತ್ತು 29ಕ್ಕೂ ಅಧಿಕ ಜನರು ಗಾಯಗೊಂಡಿದ್ದರು,(ಏಜೆನ್ಸೀಸ್).