ನೊಯ್ಡಾದಲ್ಲಿ 43ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು 
ನ್ಯೂಸ್

ನೊಯ್ಡಾ ಸೂಪರ್‌ನೋವಾದಲ್ಲಿ ದುರಂತ; 43ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು | Noida Supernova Death

ನೊಯ್ಡಾದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಹರಿಯಾಣ ಮೂಲದ ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Noida Supernova Death: ದೆಹಲಿ ಸಮೀಪದ ನೊಯ್ಡಾದ ಸೂಪರ್‌ನೋವಾ ಕಾಂಪ್ಲೆಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ನೊಯ್ಡಾದ ಸೆಕ್ಟರ್ 94ರ ಸೂಪರ್‌ನೋವಾ ಕಾಂಪ್ಲೆಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಹರಿಯಾಣದ ಮಾನೇಸರ್ ನಿವಾಸಿ ಸಂಭವ್ ಜೈನ್ ಎಂದು ಗುರುತಿಸಲಾಗಿದೆ. ಅವರು ಸೂಪರ್‌ನೋವಾದ ಏರ್‌ಬಿಎನ್‌ಬಿಯಲ್ಲಿ ತಂಗಿದ್ದು, ಶುಕ್ರವಾರ ಚೆಕ್‌ಇನ್ ಮಾಡಿದ್ದರು. ಶನಿವಾರ ಮಧ್ಯಾಹ್ನ ಚೆಕ್‌ಔಟ್ ಮಾಡಬೇಕಿದ್ದ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡದಿಂದ ಬಿದ್ದು ಆತ್ಮಹತ್ಯೆ

ಘಟನೆಗೂ ಮುನ್ನ ಮತ್ತೊಬ್ಬ ವ್ಯಕ್ತಿ ಅವರನ್ನು ತಡೆಯಲು ಪ್ರಯತ್ನಿಸಿದ್ದರೂ, ಅವರು ಮಾತು ಕೇಳದೆ ಕಟ್ಟಡದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಎಫ್‌ಎಸ್‌ಎಲ್‌ ತಂಡ ಪರಿಶೀಲನೆ ನಡೆಸಿದೆ. ಸದ್ಯ ಸಿಸಿಟಿವಿ ದೃಶ್ಯಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ

ಆರ್ಥಿಕ ಸಂಕಷ್ಟದಲ್ಲಿದ್ದ ಮೃತ?

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಂಭವ್ ಜೈನ್ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಘಟನೆಗೂ ಮುನ್ನ ಅವರು ತಂದೆಗೆ ಹಲವು ಬಾರಿ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಘಟನೆ ದೆಹಲಿ-ಎನ್‌ಸಿಆರ್‌ನ ಎತ್ತರದ ಕಟ್ಟಡಗಳಲ್ಲೊಂದಾದ ಸೂಪರ್‌ನೋವಾ ಸ್ಪೈರಾ ಟವರ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾವು; ಶಾಲೆಗಳಿಗೆ ಬೆಂಕಿ ಹಚ್ಚಿ ಪೊಲೀಸರ ಜತೆ ಗಲಾಟೆ! | France Student Protes

ಸೂಪರ್‌ನೋವಾದಲ್ಲಿ ಈ ಹಿಂದೆಯೂ ಘಟನೆ

ಸೂಪರ್‌ನೋವಾದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ವರ್ಷ 23 ವರ್ಷದ ಕಾನೂನು ವಿದ್ಯಾರ್ಥಿ 32ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. 2023ರಲ್ಲೂ 43 ವರ್ಷದ ಆಸ್ತಿ ಸಲಹೆಗಾರರೊಬ್ಬರು ಸ್ಪೈರಾ ಟವರ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದರು. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)