ನ್ಯೂಸ್

ಟ್ರಾಫಿಕ್ ದಂಡ ಶೇ. 25 ಮಾತ್ರ ವಸೂಲಿ! ವಿಧಿಸಿದ್ದು 12,000 ಕೋಟಿ ರೂ., ವಸೂಲಾಗಿದ್ದು ಕೇವಲ 3,000 ಕೋಟಿ ರೂ.

ನವದೆಹಲಿ: ಕಳೆದ ವರ್ಷ (2024) ಸಂಚಾರ ನಿಯಮ ಉಲ್ಲಂಘನೆಗಾಗಿ ದೇಶಾದ್ಯಂತ ವಿಧಿಸಲಾಗಿದ್ದ 12 ಸಾವಿರ ಕೋಟಿ ರೂ. ದಂಡದ ಪೈಕಿ 9 ಸಾವಿರ ಕೋಟಿ ರೂ. ದಂಡವನ್ನು ವಾಹನ ಸವಾರರು, ಮಾಲೀಕರು ಇನ್ನೂ ಪಾವತಿಸಿಲ್ಲ ಎಂದು ಕಾರ್ಸ್ 24 ಆಟೋಟೆಕ್ ಕಂಪನಿಯ ‘ಚಲನ್ ರಿಪೋರ್ಟ್’ ತಿಳಿಸಿದೆ.

ಒಟ್ಟಾರೆ 8 ಕೋಟಿ ಚಲನ್​ಗಳನ್ನು 2024ರಲ್ಲಿ ನೀಡಲಾಗಿತ್ತು. ರಸ್ತೆಯಲ್ಲಿರುವ ವಾಹನಗಳ ಪೈಕಿ ಅರ್ಧದಷ್ಟು ವಾಹನಗಳಿಗೆ ಒಮ್ಮೆಯಾದರೂ ದಂಡ ವಿಧಿಸಲಾಗಿದೆ. ಗುರುಗ್ರಾಮದಲ್ಲಿ ಪ್ರತಿದಿನ ಅಂದಾಜು 4500 ಚಲನ್ ನೀಡುತ್ತಿದ್ದಾರೆ. ಪ್ರತಿದಿನ ದಂಡದ ರೂಪದಲ್ಲಿ 10 ಲಕ್ಷ ರೂ. ಸಂಗ್ರಹಿಸುತ್ತಿದ್ದಾರೆ. ನೋಯ್ಡಾದಲ್ಲಿ ಒಂದೇ ತಿಂಗಳಲ್ಲಿ ಬರೀ ಹೆಲ್ಮೆಟ್ ನಿಯಮ ಉಲ್ಲಂಘನೆಗಾಗಿಯೇ 3 ಲಕ್ಷ ರೂ. ದಂಡದ ಚಲನ್ ನೀಡಲಾಗಿದೆ. ಚಲನ್​ಗಳ ಪೈಕಿ ನಾಲ್ಕು ಚಕ್ರಗಳ ವಾಹನಗಳ ಪಾಲು ಶೇ. 55ರಷ್ಟು, ದ್ವಿಚಕ್ರ ವಾಹನಗಳ ಪಾಲು ಶೇ. 45ರಷ್ಟು ಇದೆ ಎಂದು ಕಾರ್ಸ್24 ಸಹಸ್ಥಾಪಕ ಗಜೇಂದ್ರ ಜಾಂಗೀಡ್ ತಿಳಿಸಿದ್ದಾರೆ.

ಇದೇ ವೇಳೆ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ, ಶೇ. 43.9ರಷ್ಟು ವಾಹನ ಚಾಲಕರು ‘ಪೊಲೀಸರು ಇರಲಿ ಇಲ್ಲದಿರಲಿ ನಾವು ಸಂಚಾರ ನಿಯಮಗಳನ್ನು ಪಾಲಿಸುತ್ತೇವೆ’ ಎಂದು ಹೇಳಿದ್ದರೆ, ಶೇ. 31.2ರಷ್ಟು ಜನರು ‘ಪೊಲೀಸರು ಕಾಣುತ್ತಿದ್ದರೆ ಮಾತ್ರ ನಾವು ಟ್ರಾಫಿಕ್ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ. ಇತರ ಶೇ. 17.6ರಷ್ಟು ಜನರು ‘ದಂಡ ತಪ್ಪಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಅತಿ ಹೆಚ್ಚಿನ ಫೈನ್ ಯಾರಿಗೆ?

ಹರ್ಯಾಣದ ಒಬ್ಬ ಟ್ರಕ್ ಚಾಲಕನಿಗೆ 18 ಟನ್ ಓವರ್​ಲೋಡ್ ಮಾಡಿದ್ದಕ್ಕೆ 2,00,500 ರೂ. ದಂಡ ವಿಧಿಸಲಾಗಿದೆ. ಬೆಂಗಳೂರಿನ ಒಬ್ಬ ದ್ವಿಚಕ್ರ ವಾಹನ ಚಾಲಕ 475 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದ್ದು, ಆತನಿಗೆ 2.91 ಲಕ್ಷ ರೂ. ದಂಡ ವಿಧಿಸಲಾಗಿದೆ. ಇವು ಅತ್ಯಧಿಕ ದಂಡದ ಉದಾಹರಣೆಗಳಾಗಿವೆ.