ನ್ಯೂಸ್

ನಾಳೆಯಿಂದ 2 ದಿನ ಜಿ-20 ಶೃಂಗಸಭೆ: ಜಾಗತಿಕ ಸಮ್ಮೇಳನಕ್ಕೆ ಸಂಪೂರ್ಣ ಸಜ್ಜಾದ ರಾಷ್ಟ್ರ ರಾಜಧಾನಿ

ನವದೆಹಲಿ: ನಾಳೆಯಿಂದ ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಜಿ-20 ಶೃಂಗ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದ ಮಹತ್ವದ ಸಮ್ಮೇಳನ ಭಾರತದಲ್ಲಿ ನಡೆಯುತ್ತಿದ್ದು, 20 ದೇಶಗಳ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಆದರೆ, ಚೀನಾ ಮತ್ತು ರಷ್ಯಾ ಈ ಸಭೆಯಿಂದ ಹೊರಗುಳಿದಿವೆ. ಇಡೀ ವಿಶ್ವವೇ ಜಿ-20 ಸಭೆಯ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ದೆಹಲಿಯಲ್ಲಿ ಹೇಗೆಲ್ಲ ಸಿದ್ಧತೆ ಮತ್ತು ಭದ್ರತೆ ನಡೆದಿದೆ ಎಂಬುದನ್ನು ತಿಳಿಯೋಣ.

ಸಂಚಾರದ ಮೇಲೆ ಭಾರೀ ನಿರ್ಬಂಧಗಳನ್ನು ಹೇರಲಾಗಿದೆ, ಶಾಲೆಗಳನ್ನು ಮುಚ್ಚಲಾಗಿದೆ, ಭದ್ರತೆಗಾಗಿ ಫೈಟರ್​ ಜೆಟ್​ಗಳನ್ನು ನಿಯೋಜಿಸಲಾಗಿದೆ ಮತ್ತು ಪಟ್ಟಣದಾದ್ಯಂತ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ. ಸೆ.9 ಮತ್ತು 10ರಂದು ಎರಡು ದಿನಗಳ ಕಾಲ ನಡೆಯಲಿರುವ ಜಿ-20 ಶೃಂಗಸಭೆ ಯಾವುದೇ ತೊಂದರೆಯಿಲ್ಲದೆ, ಆರಾಮಾಗಿ ನಡೆಯಲು ಬೇಕಾದ ಎಲ್ಲ ಸಿದ್ಧತೆಗಳನ್ನು ದೆಹಲಿಯಲ್ಲಿ ಮಾಡಿಕೊಳ್ಳಲಾಗಿದೆ.

ಸಂಚಾರಕ್ಕೆ ಹಲವು ನಿರ್ಬಂಧ

ಇಂದು ಬೆಳಗ್ಗೆ 5 ಗಂಟೆಯಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ಬಿಗಿಯಾದ ಸಂಚಾರ ನಿಯಮಗಳು ಜಾರಿಗೆ ಬಂದಿದ್ದು, ಭಾನುವಾರ ರಾತ್ರಿ 11.59 ರವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ಆಂಬ್ಯುಲೆನ್ಸ್‌ಗಳು, ಔಷಧಗಳು ಮತ್ತು ಇತರ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮುಕ್ತವಾಗಿ ಚಲಿಸಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಓಡಾಟಕ್ಕೂ ಬ್ರೇಕ್​

ಸ್ಥಳೀಯರು ಮತ್ತು ಪ್ರವಾಸಿಗರ ವಾಹನಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ ಆದರೆ, ಅವರು ತಂಗಿರುವ ಪ್ರದೇಶದಲ್ಲಿ ಮಾತ್ರ ಓಡಾಡಬಹುದು. ವಾಕಿಂಗ್, ಸೈಕ್ಲಿಂಗ್ ಅಥವಾ ಪಿಕ್ನಿಕ್‌ಗಾಗಿ ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥಕ್ಕೆ ಭೇಟಿ ನೀಡದಂತೆ ಅಧಿಕಾರಿಗಳು ಜನರನ್ನು ಒತ್ತಾಯಿಸಿದ್ದಾರೆ.

ಬಿಗಿ ಭದ್ರತೆ

ಸಂಚಾರವನ್ನು ಸುಗಮಗೊಳಿಸಲು ಶಾಲೆಗಳು, ಬ್ಯಾಂಕ್‌ಗಳು ಮತ್ತು ಎಲ್ಲ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ನೆರೆಯ ರಾಜ್ಯಗಳ ಗಡಿಗಳನ್ನೂ ಮುಚ್ಚಲಾಗುವುದು. 1 ಲಕ್ಷಕ್ಕೂ ಪೊಲೀಸ್​ ಮತ್ತು ಭದ್ರತಾ ಸಿಬ್ಬಂದಿಗಳು ದೆಹಲಿಯ ರಸ್ತೆಗಳಲ್ಲಿ ಗಸ್ತು ತಿರುಗಲಿದ್ದಾರೆ. ಫೈಟರ್​ ಜೆಟ್​​ಗಳು, ಸುಧಾರಿತ ಎಐ ಆಧಾರಿತ ಕ್ಯಾಮೆರಾಗಳು, ಜ್ಯಾಮಿಂಗ್​ ಸಾಧನಗಳು ಮತ್ತು ಸ್ನಿಫ್ಫರ್​ ಶ್ವಾನಗಳನ್ನು ನಿಯೋಜಿಸಲಾಗಿದೆ.

ನಗರದಾದ್ಯಂತ ಅಳವಡಿಸಲಾಗಿರುವ 5,000 ಸಿಸಿಟಿವಿ ಕ್ಯಾಮೆರಾಗಳ ನೆಟ್‌ವರ್ಕ್‌ನ ಸಹಾಯದಿಂದ ದೆಹಲಿ ಪೊಲೀಸರು ಶೃಂಗಸಭೆಯ ಸಮಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಅತ್ಯಾಧುನಿಕ ನಿಯಂತ್ರಣ ಕೊಠಡಿಯಿಂದ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆಯಿಂದ ಎರಡು ದಿನ ನಡೆಯಲಿರುವ ಶೃಂಗಸಭೆಯಲ್ಲಿ 20 (G20) ದೇಶಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಮತ್ತು ಹವಾಮಾನ ಬದಲಾವಣೆ ಹಾಗೂ ಬಡತನದಂತಹ ವಿಶ್ವದ ಕೆಲವು ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆಗಳಿಗೆ ಸಾಕ್ಷಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರು ಇಂದು ದೆಹಲಿಗೆ ಆಗಮಿಸಲಿದ್ದು, ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಜತೆ ವ್ಯವಹಾರ ಮತ್ತು ಭಾರತದೊಂದಿಗೆ ಸುದೀರ್ಘ ಗಡಿ ಬಿಕ್ಕಟ್ಟನ್ನು ಹೊಂದಿದ್ದು, ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಸಮಯದಲ್ಲಿ G20 ಸಭೆಗೆ ಗೈರಾಗಲಿದ್ದಾರೆ. ಈ ಶೃಂಗಸಭೆಯಲ್ಲಿ ಚೀನಾ ಅಥವಾ ರಷ್ಯಾಕ್ಕಿಂತ ಯುಎಸ್ ಉತ್ತಮ ಪಾಲುದಾರ ಎಂದು ತೋರಿಸಲು ಬೈಡೆನ್ ಪ್ರಯತ್ನ ಮಾಡಲಿದ್ದಾರೆ. (ಏಜೆನ್ಸೀಸ್​)