ನ್ಯೂಸ್

15 ಸಾವಿರ ರೂ. ಬೆಟ್ಟಿಂಗ್​ಗಾಗಿ ಪ್ರಾಣವನ್ನೇ ಕಳೆದುಕೊಂಡ ಯುವಕ!

ಮೋಹನ್​ ಶೆಟ್ಟಿ

ಉತ್ತರ ಪ್ರದೇಶ: ಟ್ರ್ಯಾಕ್ಟರ್ ಸ್ಟಂಟ್ ಮಾಡಿ, ನೋಡುಗರನ್ನು ಬೆರಗುಗೊಳಿಸುವ ಉತ್ಸಾಹದಿಂದ ಬೆಟ್ಟಿಂಗ್​ ಕಟ್ಟಿದ್ದ ಯುವಕನೊಬ್ಬ ನೋಡ ನೋಡುತ್ತಿದ್ದಂತೆ ಅಪಘಾತಕ್ಕೆ ತುತ್ತಾಗಿ, ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ವರದಿಯಾಗಿದೆ. ಸ್ಟಂಟ್​ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪೊಲೀಸ್​ ಅಧಿಕಾರಿಗಳ ಪ್ರಕಾರ, ಮೃತ ಯುವಕನನ್ನು ನೀರಜ್ ಮೌರ್ಯ (22) ಎಂದು ಗುರುತಿಸಲಾಗಿದ್ದು, ಹಿಮ್ಮತ್‌ನಗರ ಏಟ್ರಿಯಾದ ಜೋಗಿಂದರ್ ಯಾದವ್ ಎಂಬಾತನೊಂದಿಗೆ 15,000 ರೂ. ಬೆಟ್ಟಿಂಗ್ ಕಟ್ಟಿದ್ದ. ತನ್ನ ಟ್ರ್ಯಾಕ್ಟರ್ ಅನ್ನು ಮತ್ತೊಂದು ಟ್ರ್ಯಾಕ್ಟರ್​ಗೆ ಕಟ್ಟಿ ವಿರುದ್ಧ ದಿಕ್ಕಿನಲ್ಲಿ ಓಡಿಸುವುದೇ ಸವಾಲು. ಸಾಹಸ ಮಾಡುವ ವೇಳೆ ಚಾಲಕ ಮೌರ್ಯನ ದೇಹದ ಮೇಲೆ ವಾಹನ ನೇರವಾಗಿ ನಿಂತ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಇಬ್ಬರೂ ಯುವಕರು ಒಂದೇ ಗ್ರಾಮದವರಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಟ್ರಾಕ್ಟರ್‌ಗಳಲ್ಲಿ ಪಣತೊಟ್ಟಿದ್ದನ್ನು ವೀಕ್ಷಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಟೌಂಜಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಮ್ಮತ್‌ನಗರ ಏಟ್ರಿಯಾದಲ್ಲಿ ಈ ಘಟನೆ ಸಂಭವಿಸಿದೆ,(ಏಜೆನ್ಸೀಸ್).