ನ್ಯೂಸ್

ಚಾರ್ಜ್​ಗೆ ಹಾಕಿ ಹಾಡುವಾಗ ಭಾರೀ ಶಬ್ದದೊಂದಿಗೆ ಕರೋಕೆ ಮೈಕ್ ಸ್ಫೋಟ: ಅದೃಷ್ಟವಶಾತ್​ ಬಾಲಕಿ ಪಾರು​

ಪಲಕ್ಕಾಡ್​: ಕರೋಕೆ ಮೈಕ್​ ಅನ್ನು ಚಾರ್ಜ್​ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯ ಕಲ್ಲಡಿಕೋಡ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಬಚಾವ್​ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್​. ಈ ಘಟನೆ ಕಳೆದ ಭಾನುವಾರ ನಡೆದಿದೆ. ಭಾರೀ ಶಬ್ದದೊಂದಿಗೆ ಮೈಕ್​ ಸ್ಫೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ. ಕರೋಕೆ ಮೈಕ್​ ಅನ್ನು ಆನ್​ಲೈನ್​ ಸೈಟ್​ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿ ಮಾಡಲಾಗಿತ್ತು.

ಮೈಕ್​ ಅನ್ನು ಚಾರ್ಜ್​ಗೆ ಹಾಕಿ, ಬಾಲಕಿ ಹಾಡು ಹೇಳುವಾಗ ಇದ್ದಕ್ಕಿದ್ದಂತ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ. ಅದು ಚೀನಾ ನಿರ್ಮಿತ ಮೈಕ್​ ಎಂದು ಪಾಲಕರು ತಿಳಿಸಿದ್ದಾರೆ. ಆದರೆ ಮೈಕ್‌ನಲ್ಲಿ ಕಂಪನಿಯ ಹೆಸರು ಸ್ಪಷ್ಟವಾಗಿಲ್ಲದ ಕಾರಣ, ಕಂಪನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.

ಯಾವುದೇ ಸಾಧನಗಳನ್ನು ಚಾರ್ಜ್​ಗೆ ಹಾಕಿ ಬಳಸುವ ಅಭ್ಯಾಸವನ್ನು ಮೊದಲು ಬಿಡಬೇಕು. ಸಣ್ಣ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಹುದು. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಅದೃಷ್ಟ ಎಂದೇ ಹೇಳಬಹುದು. ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದೆ. (ಏಜೆನ್ಸೀಸ್​)