ನ್ಯೂಸ್

ಕದ್ದ ಕಲಾಕೃತಿಗಳನ್ನೆಲ್ಲ 15ವರ್ಷಗಳ ಬಳಿಕ ಹಿಂದಿರುಗಿಸಿದ ಮಹಿಳೆ; ದುರದೃಷ್ಟವೇ ಕಾರಣ

ದಕ್ಷಿಣ ಇಟಲಿಯ ಪ್ರಾಚೀನ ನಗರವಾದ ಪೊಂಪೈಯಿಂದ ಕೆಲವು ಕಲಾಕೃತಿಗಳನ್ನು ಕದ್ದುಕೊಂಡುಹೋಗಿದ್ದ ಮಹಿಳೆಯೋರ್ವರು ಬರೋಬ್ಬರಿ 15ವರ್ಷಗಳ ನಂತರ ಅದನ್ನು ಹಿಂತಿರುಗಿಸಿದ್ದಾರೆ.

ಆ ಕಲಾಕೃತಿ ತುಣುಕಗಳನ್ನು ಕದ್ದು ಹೋದಾಗಿನಿಂದ ನಾವು ಶಾಪಕ್ಕೆ ಒಳಗಾದಂತೆ ಕಷ್ಟ ಅನುಭವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತನ್ನನ್ನು ತಾನು ಕೆನಡಾದವಳು, ನನ್ನ ಹೆಸರು ನಿಕೋಲ್​ ಎಂದು ಗುರುತಿಸಿಕೊಂಡಿರುವ ಮಹಿಳೆ, 15 ವರ್ಷಗಳ ಹಿಂದೆ ಕದ್ದ ಮಾಲನ್ನು, ಒಂದು ಪತ್ರದೊಂದಿಗೆ ಪಾರ್ಸೆಲ್​ ಮಾಡಿದ್ದಾಳೆ. ಅಂಫೋರಾದ ಒಂದು ಭಾಗವಾಗಿದ್ದ ಮೊಸಾಯಿಟ್​ ಟೈಲ್ಸ್​ಗಳನ್ನು, ಕೆಲವು ಪಿಂಗಾಣಿ ತುಂಡುಗಳನ್ನು ಸೇರಿ ಕೆಲವು ಕಲಾಕೃತಿಗಳನ್ನು ಕದ್ದೊಯ್ದಿದ್ದಳು. ಇದೀಗ ಅದನ್ನೆಲ್ಲವನ್ನೂ ಒಂದು ಚೀಲದಲ್ಲಿ ಕಟ್ಟಿ, ಅದರೊಂದಿಗೆ ತಪ್ಪೊಪ್ಪಿಗೆ ಪತ್ರವನ್ನಿಟ್ಟು ಪಾರ್ಸೆಲ್​ ಮಾಡಿದ್ದಾರೆ.

2005ರಲ್ಲಿ ಪೊಂಪೈನ ಪುರಾತತ್ವ ಉದ್ಯಾನವನಕ್ಕೆ ನಿಕೋಲ್​ ಭೇಟಿ ನೀಡಿದ್ದರು. ಅಂದು ಕೆಲವು ವಸ್ತುಗಳು ಆಕೆಯನ್ನು ಆಕರ್ಷಿಸಿದ್ದರಿಂದ ಅದನ್ನೆಲ್ಲ ಎತ್ತಿಕೊಂಡು ಹೋಗಿದ್ದಳು. ಅದಾದ ಬಳಿಕ ನಂತರದ ವರ್ಷಗಳಲ್ಲಿ ಪಡಬಾರದ ಕಷ್ಟವನ್ನೆಲ್ಲ ಪಟ್ಟೆ. ಈ ಕಳ್ಳತನದಿಂದಲೇ ನನಗೆ ಹಾಗಾಗಿಯಿತು. ಹಾಗಾಗಿ ಕದ್ದ ವಸ್ತುವನ್ನೆಲ್ಲ ಅಲ್ಲಿಗೇ ವಾಪಸ್​ ಕಳಿಸಲು ನಿರ್ಧರಿಸಿದೆ ಎಂದು ನಿಕೋಲ್ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರಧಾನಿ ಮೋದಿ ಧರಿಸುವ ಮಾಸ್ಕ್ ದಾವಣಗೆರೆಯಲ್ಲಿ ತಯಾರಾದದ್ದು!

ಇವನ್ನೆಲ್ಲ ವಾಪಸ್​ ತೆಗೆದುಕೊಂಡು ಬಿಡಿ..ನನ್ನ ಪಾಲಿಗೆ ದುರದೃಷ್ಟವನ್ನೇ ತಂದಿವೆ ಇವು ಎಂದು ಪತ್ರದಲ್ಲಿ ಆಕೆ ಬರೆದಿದ್ದಾರೆ. ಅದು ನಮ್ಮಮನೆಗೆ ಬಂದಾಗಿನಿಂದ ನೆಗೆಟಿವ್​ ಎನರ್ಜಿಗಳು ಹೆಚ್ಚಿವೆ ಎಂದು ಹೇಳಿಕೊಂಡಿದ್ದಾಳೆ.

ಪೊಂಪೈ ಒಂದು ಪ್ರಸಿದ್ಧ ಪ್ರವಾಸಿಗರ ತಾಣವಾಗಿದ್ದು, ಕಳ್ಳತನವೂ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿನ ಶಿಲಾಕೃತಿಗಳನ್ನು, ವಸ್ತುಗಳನ್ನು ಹಲವರು ಕದ್ದಿದ್ದಾರೆ. ಅದರಲ್ಲಿ ಈ ಮಹಿಳೆಯೂ ಒಬ್ಬರಾಗಿದ್ದರು. (ಏಜೆನ್ಸೀಸ್​)