ಬೆಂಗಳೂರು: ತನ್ನಷ್ಟಕ್ಕೆ ತಾನು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಬಳಿಗೆ ಬೈಕ್ನಲ್ಲಿ ಬಂದ 18 ವರ್ಷದ ಯುವಕನೊಬ್ಬ ಆಕೆಯ ಮೈಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಗಂಗಾನಗರ ನಿವಾಸಿ 40 ವರ್ಷದ ಮಹಿಳೆಯು ಜೂ. 20ರ ಮಧ್ಯಾಹ್ನ 12ರ ಸುಮಾರಿನಲ್ಲಿ ದಿನಸಿ ಸಾಮಗ್ರಿ ಖರೀದಿಸಿ, ಗಿಡ್ಡಪ್ಪ ಬ್ಲಾಕ್ ದೃವ ಅಪಾರ್ಟ್ಮೆಂಟ್ ಬಳಿ ರಸ್ತೆಬದಿ ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಸ್ಕೂಟರ್ನಲ್ಲಿ ಬಂದ ಆರೋಪಿ ಲಕ್ಷ್ಮಯ್ಯ ಬ್ಲಾಕ್ ನಿವಾಸಿ ಸಂತೋಷ್ (18), ಮಹಿಳೆಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ. ಇದನ್ನೂ ಓದಿರಿ ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!
ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ತನಿಖೆ ಕೈಗೊಂಡ ಆರ್.ಟಿ. ನಗರ ಪೊಲೀಸರು ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದರು. ಆರೋಪಿಯ ಮುಖಚಹರೆ ಹಾಗೂ ಸ್ಕೂಟರ್ ನಂಬರ್ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಹಿಂದೆಯೂ ಕೃತ್ಯ ಎಸಗಿರುವ ಶಂಕೆ ಇದೆ. ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.