ನೇಪಾಳದಲ್ಲಿ ಭೀಕರ ಮಳೆ-ಭೂಕುಸಿತ 
ನ್ಯೂಸ್

ನೇಪಾಳದಲ್ಲಿ ಮಳೆ ಮರಣಮೃದಂಗ: ಭೂಕುಸಿತಕ್ಕೆ 10 ಬಲಿ, ನೋಡನೋಡುತ್ತಿದ್ದಂತೆ ಕೊಚ್ಚಿಹೋಯ್ತು ಸೇತುವೆ! | Nepal Flood

Nepal Rain: ನೇಪಾಳದಲ್ಲಿ ಭಾರಿ ಮಳೆ ಹಾಗೂ ಭೂಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮನೆ, ರಸ್ತೆ, ಸೇತುವೆ ಹಾಗೂ ವಿದ್ಯುತ್‌ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಬಾಗ್ಲುಂಗ್ ಜಿಲ್ಲೆಯಲ್ಲಿ ಭೂಕುಸಿತಕ್ಕೆ 10 ಮಂದಿ ಮೃತಪಟ್ಟಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ.

ಬಾಗ್ಲುಂಗ್‌ನ ನಿಸಿಖೋಲಾ ಗ್ರಾಮೀಣ ಮುನ್ಸಿಪಾಲಿಟಿ-3ರಲ್ಲಿ ಮುಂಜಾನೆ ಮನೆಯೊಂದರ ಮೇಲೆ ಭೂಕುಸಿತ ಕುಸಿದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಶ್ಯಾಮ್ ಕುಮಾರಿ ಬಿಕೆ ಹಾಗೂ ಅವರ ಪುತ್ರರಾದ ಮನೋಜ್, ಮುಖೇಶ್ ಮತ್ತು ನಿಶಾನ್ ಎನ್ನಲಾಗಿದೆ. ತಮನ್‌ಖೋಲಾ ಗ್ರಾಮೀಣ ಮುನ್ಸಿಪಾಲಿಟಿಯಲ್ಲೂ ಭೂಕುಸಿತದಿಂದ ಭಾರೀ ಹಾನಿಯಾಗಿದ್ದು, ಧರ್ನಾಸುಕ್‌ನಲ್ಲಿ ಮನೆಯೊಂದು ಮಣ್ಣಿನಡಿ ಸಿಲುಕಿ ವೃದ್ಧ ದಂಪತಿ ಮೃತಪಟ್ಟಿದ್ದಾರೆ. ಸಂತ್ರ್ ಪ್ರದೇಶದಲ್ಲೂ ಇಬ್ಬರು ಸಾವಿಗೀಡಾಗಿದ್ದು, ಒಟ್ಟು ಎಂಟು ಮನೆಗಳು ಕೊಚ್ಚಿಹೋಗಿವೆ.

ಕಾಳಿ ಗಂಡಕಿ ಪ್ರವಾಹಕ್ಕೆ ಕೊಚ್ಚಿಹೋಯ್ತು ಸೇತುವೆ

ಮ್ಯಾಗ್ಡಿ ಜಿಲ್ಲೆಯ ಅನ್ನಪೂರ್ಣ ಗ್ರಾಮೀಣ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಕಾಳಿ ಗಂಡಕಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ರಭಸಕ್ಕೆ ಬಾನಿ–ಜೋಮ್ಸೋಮ್–ಕೋರಾಲಾ ರಸ್ತೆಯ ಮೋಟಾರು ಸೇತುವೆ ಕೊಚ್ಚಿಹೋಗಿದೆ. ಇದರಿಂದ ಮುಸ್ತಾಂಗ್‌ಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಫಾಗಮ್ ಮತ್ತು ಗಿವಾಂಗ್ ಗ್ರಾಮಗಳಲ್ಲೂ ಭೂಕುಸಿತ ಸಂಭವಿಸಿದ್ದು, ಎರಡು ಮನೆಗಳು ಮಣ್ಣಿನಡಿ ಸಿಲುಕಿವೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

358.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸ್ಥಗಿತ

ಪ್ರವಾಹ ಮತ್ತು ಭೂಕುಸಿತದಿಂದ ಕಾಳಿ ಗಂಡಕಿ ಕಾರಿಡಾರ್‌ನ 220 ಕೆವಿ ಪ್ರಸರಣ ಮಾರ್ಗದ ಡಾನಾ–ಕುಶ್ಮಾ ವಿಭಾಗದ ಟವರ್‌ಗಳು ಹಾನಿಗೊಂಡಿವೆ. ಪರಿಣಾಮ 12 ಜಲವಿದ್ಯುತ್ ಯೋಜನೆಗಳಿಂದ ಉತ್ಪಾದನೆಯಾಗುತ್ತಿದ್ದ 358.2 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ದುರಸ್ತಿ ಹಾಗೂ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ನೇಪಾಳ ವಿದ್ಯುತ್ ಪ್ರಾಧಿಕಾರ ತಾಂತ್ರಿಕ ತಂಡಗಳನ್ನು ನಿಯೋಜಿಸಿದೆ. ಆದರೆ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಮತ್ತು ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ.

ಇದನ್ನೂ ಓದಿ: ನಿಮ್ಮ ಫೋಟೋಶೂಟ್‌ ನ್ಯಾಚುರಲ್‌ ಹಾಗೂ ಸ್ಟೈಲಿಶ್‌ ಆಗಿರಬೇಕಾ? ಹಾಗಾದ್ರೆ ಈ ಟಿಪ್ಸ್‌ ಪಾಲಿಸಿ...Photoshoot Tips

684 ಮಂದಿಯ ಸುರಕ್ಷಿತ ಸ್ಥಳಾಂತರ

ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನೇಪಾಳದ ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸೆಪ್ಟೆಂಬರ್ 27ರಂದು ನೇಪಾಳಿ ಸೇನೆ 684 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಸ್ತೆ, ಸೇತುವೆ ಹಾಗೂ ವಿದ್ಯುತ್‌ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವು-ನೋವಿನ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.