| ದೇವರಾಜ್ ಕನಕಪುರ ಬೆಂಗಳೂರು
ರಾಜ್ಯದ ಶಿಕ್ಷಕರ ಬಹುದಿನಗಳ ವರ್ಗಾವಣೆ ಕನಸು ನನಸಾಗುವ ಕಾಲ ಇನ್ನಷ್ಟು ಹತ್ತಿರವಾಗಿದೆ. ಶಿಕ್ಷಕರ ವರ್ಗಾವಣೆ ನಿಯಮವನ್ನು ಅಂತಿಮಗೊಳಿಸಿರುವ ಶಿಕ್ಷಣ ಇಲಾಖೆ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ, ವರ್ಗಾವಣೆ ನಿಯಮ ಪ್ರಶ್ನಿಸಿ ಶಿಕ್ಷಕರು ಮತ್ತೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವ ಹಿನ್ನೆಲೆ ಯಲ್ಲಿ ಹೈಕೋರ್ಟ್ಗೆ ಕೇವಿಯೆಟ್ ಸಲ್ಲಿಸಲು ಸಹ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಸುಗ್ರೀವಾಜ್ಞೆ ಮೂಲಕ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ, ಕರಡು ಪ್ರತಿ ರೂಪಿಸಿ ಸಾರ್ವಜನಿಕರ ಆಕ್ಷೇಪಣೆೆ ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚಿನ ಆಕ್ಷೇಪಣೆಗಳು ಬಂದಿದ್ದು, ಇದನ್ನು ಪರಿಶೀಲಿಸಿ ಅಂತಿಮ ನಿಯಮಗಳನ್ನು ರೂಪಿಸಿ, ಶುಕ್ರವಾರ ಅಧಿಕೃತ ಆದೇಶವಾಗಿದೆ. ಆದರೆ, ಶಿಕ್ಷಕರ ವರ್ಗಾವಣೆಗೆ ಮೊದಲಿನಿಂದಲೂ ವಿಘ್ನ ಎದುರಾಗುತ್ತಿರುವುದರಿಂದ ಅಂತಿಮಗೊಂಡಿರುವ ನಿಯಮಗಳನ್ನು ವೇಳಾಪಟ್ಟಿ ರೂಪಿಸಿದ ನಂತರವೇ ಸಾರ್ವಜನಿಕರ ಮಾಹಿತಿಗೆ ಬಿಡುಗಡೆ ಮಾಡಲು ತೀರ್ವನಿಸಿದೆ. ಒಮ್ಮೆ ಶಿಕ್ಷಣ ಇಲಾಖೆ ವೇಳಾಪಟ್ಟಿ ರೂಪಿಸಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರೆ ಇದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗುವ ಶಿಕ್ಷಕರಿಗೆ ಜಯ ಸಿಗುವ ಸಾಧ್ಯತೆ ಕಡಿಮೆ. ಏಕೆಂದರೆ, ಪ್ರಕ್ರಿಯೆ ಸ್ಥಗಿತ ಮಾಡುವ ಬದಲು ಮುಂದಿನ ಬಾರಿಗೆ ಸರಿಪಡಿಸಿಕೊಳ್ಳುವಂತೆ ಕೋರ್ಟ್ ಆದೇಶ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ. ಹಾಗಾಗಿಯೇ ವೇಳಾಪಟ್ಟಿ ಜತೆಗೆ ನಿಯಮಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಬಗ್ಗೆ ಇಲಾಖೆ ಆಲೋಚಿಸಿದೆ.
ಕೇವಿಯೆಟ್ ಏಕೆ?: ವರ್ಗಾವಣೆ ನಿಯಮ ಪ್ರಶ್ನಿಸಿ ಶಿಕ್ಷಕರು ಕೋರ್ಟ್ ಮೆಟ್ಟಿಲೇರಿದರೂ, ಕೋರ್ಟ್ ಶಿಕ್ಷಣ ಇಲಾಖೆಯ ನಿಲುವು ಪಡೆದುಕೊಂಡ ಮೇಲೆ ಮುಂದಿನ ಆದೇಶ ಹೊರಡಿಸಬೇಕಾಗುತ್ತದೆ. ಈ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
70 ಸಾವಿರ ಶಿಕ್ಷಕರಿಂದ ಅರ್ಜಿ: ವರ್ಗಾವಣೆಗೆ ಈಗಾಗಲೇ 70 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. 2019ರಲ್ಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಆದರೆ, ಕರೊನಾ ಕಾರಣ ಹಾಗೂ ವರ್ಗಾವಣೆ ವೇಳಾಪಟ್ಟಿ ಪ್ರಶ್ನಿಸಿ ಕೆಲ ಶಿಕ್ಷಕರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ವಿಳಂಬವಾಯಿತು. ಇದಾದ ನಂತರ ಕಡ್ಡಾಯ ವರ್ಗಾವಣೆಯಲ್ಲಿ ವಂಚಿತರಾದವರಿಗೆ ಮತ್ತೆ ಹೊಸ ವರ್ಗಾವಣೆ ನೀತಿಯಲ್ಲಿ ಅವಕಾಶ ಕಲ್ಪಿಸಬೇಕಾಗಿದ್ದರಿಂದ ವಿಳಂಬವಾಗುತ್ತಲೇ ಇದೆ. ಸದ್ಯ ಶಿಕ್ಷಣ ಇಲಾಖೆ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಇಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪ್ರತ್ಯೇಕ ಅಧಿಕಾರಿಗಳ ನೇಮಕ ಮಾಡಲೂ ಸೂಚನೆ ನೀಡಿದೆ.
ವರ್ಗಾವಣೆ ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ಭೌತಿಕ ತರಗತಿಗಳ ಆರಂಭಕ್ಕೂ ಮುನ್ನ ವರ್ಗಾವಣೆ ಕೌನ್ಸೆಲಿಂಗ್ ಮಾಡಿ ಮುಗಿಸುವುದು ಉತ್ತಮ. ಆದಷ್ಟು ಬೇಗ ವೇಳಾಪಟ್ಟಿ ಬಿಡುಗಡೆ ಮಾಡಬೇಕು.
| ಚಂದ್ರಶೇಖರ್ ನುಗ್ಲಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ