ನ್ಯೂಸ್

77 ವೈದ್ಯಕೀಯ ವಿದ್ಯಾರ್ಥಿಗಳ ಪಾಲಿಗೆ ಹೀರೋ ಆದ ಸಂಸದ ದೀಪಕ್​ ಅಧಿಕಾರಿ...

ಕೋಲ್ಕತ್ತ: ಕರೊನಾ ಲಾಕ್​ಡೌನ್​ನಿಂದ ಕಳೆದ ಮೂರು ತಿಂಗಳಿಂದ ಮಾಸ್ಕೋದಲ್ಲಿ ಸಿಲುಕಿ ಪರದಾಡುತ್ತಿದ್ದ 77 ವೈದ್ಯಕೀಯ ವಿದ್ಯಾರ್ಥಿಗಳು ಕೊನೆಗೂ ತಮ್ಮ ಊರಿಗೆ ಮರಳಿದ್ದಾರೆ. ಇಂದು ಕೊಲ್ಕತ್ತದ ನೇತಾಜಿ ಸುಭಾಷ್​ ಚಂದ್ರ ಭೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಾಸ್ಕೋದಲ್ಲಿ ತುಂಬ ಭಯದಿಂದ ಇದ್ದ ಆ ವಿದ್ಯಾರ್ಥಿಗಳ ಮನಸೆಲ್ಲ ಊರಿನ ಕಡೆಗೆ ವಾಲುತ್ತಿತ್ತು. ಎಷ್ಟೊತ್ತಿಗೆ ಮನೆ ಸೇರುತ್ತೇವೆ ಎಂಬ ಕಾತರದಲ್ಲಿ ಇದ್ದರೂ, ಭಾರತಕ್ಕೆ ವಾಪಸ್​ ಬರಲು ಕಷ್ಟವಾಗುತ್ತಿತ್ತು. ಅವರೆಲ್ಲರ ಪಾಲಿಗೆ ಸಂಸದರೋರ್ವರು ಹೀರೋ ಆಗಿದ್ದಾರೆ.

ಕಳೆದ ಒಂದು ತಿಂಗಳಿಂದಲೂ ವಿದ್ಯಾರ್ಥಿಗಳು ತಮಗೆ ಸಹಾಯ ಮಾಡುವಂತೆ ಪಶ್ಚಿಮ ಬಂಗಾಳದ ಕೆಲವು ಪ್ರಮುಖರಿಗೆ ತಾವು ಇದ್ದಲ್ಲಿಂದಲೇ ಮನವಿ ಮಾಡಿದ್ದರು. ಹೇಗಾದರೂ ಊರು ಸೇರಬೇಕು ಎಂಬ ಆಸೆಯಿಂದ ಅದೆಷ್ಟೋ ಪ್ರಯತ್ನಗಳನ್ನು ಮಾಡಿದ್ದರು. ಕೊನೆಗೆ ಅವರ ಸಹಾಯಕ್ಕೆ ನಿಂತಿದ್ದು ಟಾಲಿವುಡ್​ ನಟನೂ ಆಗಿರುವ ಘಟಲ್​ ಕ್ಷೇತ್ರದ ಸಂಸದ ದೀಪಕ್​ ಅಧಿಕಾರಿ(ದೇವ್​). ಈ 77 ವಿದ್ಯಾರ್ಥಿಗಳು ಊರಿಗೆ ವಾಪಸ್​ ಬರಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನೂ ಸಂಸದ ಮಾಡಿದ್ದಾರೆ. ಇದನ್ನೂ ಓದಿ: ಆನ್​ಲೈನ್​ನಲ್ಲಿ ಮದ್ಯ ಆರ್ಡರ್​ ಮಾಡಿ ಭರ್ಜರಿ ಹಣ ಕಳೆದುಕೊಂಡ ಮಾಜಿ ಪ್ರಧಾನಿಯ ಮಾಜಿ ಮಾಧ್ಯಮ ಸಲಹೆಗಾರ

ನಾವು ಹಲವು ಪ್ರಮುಖ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಟ್ವೀಟರ್​​​ನಂತ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದೆವು. ಆದರೆ ಕೊವಿಡ್​-19 ಹೆಚ್ಚುತ್ತಿರುವ ಕಾರಣ ಸರಿಯಾಗಿ ವ್ಯವಸ್ಥೆ ಆಗಲಿಲ್ಲ. ಯಾರೂ ಸ್ಪಂದಿಸಿರಲಿಲ್ಲ. ಕೊನೆಗೆ ದೀಪಕ್​ ಅಧಿಕಾರಿ ಅವರು ನನ್ನ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ, ನಿಮ್ಮನ್ನೆಲ್ಲ ವಾಪಸ್​ ಕರೆಸಿಕೊಳ್ಳಲು ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದರು. ಅದರಂತೆ ನಡೆದುಕೊಂಡರು. ಈಗ ನಾವೆಲ್ಲ ಮನೆಯಲ್ಲಿದ್ದೇವೆ ಎಂದು ಮಾಸ್ಕೋದಿಂದ ವಾಪಸ್​ ಬಂದ ವಿದ್ಯಾರ್ಥಿಗಳಲ್ಲಿ ಓರ್ವನಾದ ಅಖಿಲೇಂದು ಖರಕ್​ ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ, ನಾಡೋಜ ಗೀತಾ ನಾಗಭೂಷಣ್​ ಹೃದಯಾಘಾತದಿಂದ ನಿಧನ

ಜೂ.11ರಂದು ಟ್ವೀಟ್ ಮಾಡಿದ್ದ ದೀಪಕ್​ ಅಧಿಕಾರಿ (ದೇವ್​), ನಾನು ಹಾಗೂ ನನ್ನ ತಂಡ ಮಾಸ್ಕೋದಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳೊಟ್ಟಿಗೆ ಸಂಪರ್ಕದಲ್ಲಿದ್ದೇವೆ. ಅವರನ್ನು ವಾಪಸ್​ ಕರೆಸುವ ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದು ಟ್ವೀಟ್​ ಮಾಡಿದ್ದರು. ಅದಾದ ಎರಡೇ ವಾರದಲ್ಲಿ ಎಲ್ಲರೂ ವಾಪಸ್​ ಬಂದಿದ್ದಾರೆ. ನಟ, ಸಂಸದ ದೇವ್​​ಗೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸಿಸ್​)