ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ(ಸೆ.13) ಬೆಳಗ್ಗೆ ಪ್ರಾರಂಭದಲ್ಲಿ ಸೆನ್ಸೆಕ್ಸ್ 100 ಅಂಕಗಳಿಗಿಂತ ಹೆಚ್ಚು ಕುಸಿದಿದೆ. ನಿಫ್ಟಿ ಕೂಡ 40 ಪಾಯಿಂಟ್‌ಗಳಷ್ಟು ಕುಸಿತ ಕಂಡಿತು.
ಸೆನ್ಸೆಕ್ಸ್ 100ಕ್ಕೂ ಹೆಚ್ಚು ಅಂಕಗಳ ಕುಸಿತದೊಂದಿಗೆ ಅಂದರೆ 82,830 ಪಾಯಿಂಟ್ನೊಂದಿಗೆ ವಹಿವಾಟು ನಡೆಸುತ್ತಿದೆ. ನಿಫ್ಟಿಯಲ್ಲೂ 40 ಅಂಕ ಕುಸಿತವಾಗಿದ್ದು, 25,350 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
30 ಸೆನ್ಸೆಕ್ಸ್ ಷೇರುಗಳಲ್ಲಿ 10 ಏರಿಕೆಯಾಗುತ್ತಿವೆ. 20 ಕುಸಿಯುತ್ತಿವೆ. ನಿಫ್ಟಿಯ 50 ಷೇರುಗಳಲ್ಲಿ 17 ಏರಿಕೆಯಾಗುತ್ತಿದ್ದು, 33 ಇಳಿಕೆಯಾಗುತ್ತಿವೆ. ಎನ್‌ಎಸ್‌ಇಯ ವಲಯದ ಸೂಚ್ಯಂಕದಲ್ಲಿ ಎಫ್‌ಎಂಸಿಜಿ ಮತ್ತು ಐಟಿ ಷೇರುಗಳಲ್ಲಿ ಮಾರಾಟ ಕಂಡುಬರುತ್ತಿದೆ.
ಗುರುವಾರ ಸೆಪ್ಟೆಂಬರ್ 12 ರಂದು ಸೆನ್ಸೆಕ್ಸ್ 83,116 ಮತ್ತು ನಿಫ್ಟಿ 25,433 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದಾಗ್ಯೂ, ನಂತರ ಈ ಎರಡೂ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಇಳಿದವು. ಸೆನ್ಸೆಕ್ಸ್ 1,439 ಅಂಕಗಳು (ಶೇ.1.77) 82,962 ಕ್ಕೆ ಏರಿತು ಮತ್ತು ನಿಫ್ಟಿ 470 (ಶೇ.1.89) ಅಂಕಗಳನ್ನು ಏರಿ 25,388 ಕ್ಕೆ ತಲುಪಿತ್ತು.
ಏಷ್ಯಾ ಮಾರುಕಟ್ಟೆಯಲ್ಲಿ ಜಪಾನ್‌ನ ನಿಕ್ಕಿ ಶೇ.0.89 ಮತ್ತು ಕೊರಿಯಾದ ಕೋಸ್ಪಿ ಶೇ.0.24ರಷ್ಟು ಕುಸಿದಿವೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ.1.12ರಷ್ಟು ಏರಿದರೆ, ಚೀನಾದ ಶಾಂಘೈ ಕಾಂಪೋಸಿಟ್ ಶೇ.0.13ರಷ್ಟು ಕುಸಿದಿದೆ.
ಸೆಪ್ಟೆಂಬರ್ 12 ರಂದು, ಯುಎಸ್ ಮಾರುಕಟ್ಟೆ ಡೌ ಜೋನ್ಸ್ ಶೇ.0.58 ಏರಿಕೆಯೊಂದಿಗೆ 41,096 ನಲ್ಲಿ ಕೊನೆಗೊಂಡಿತು. ನಾಸ್ಡಾಕ್ ಶೇ.1 ಗಳಿಸಿತು, ಎಸ್ಅಂಡ್ಪಿ ಶೇ.500 0.75 ಏರಿಕೆಯಾಗಿ 5,595 ಕ್ಕೆ ಕೊನೆಗೊಂಡಿತು.
ಎನ್‌ಎಸ್‌ಇ ಅಂಕಿಅಂಶಗಳ ಪ್ರಕಾರ, ವಿದೇಶಿ ಹೂಡಿಕೆದಾರರು (ಎಫ್‌ಐಐ) ಸೆಪ್ಟೆಂಬರ್ 12 ರಂದು 7,695 ಕೋಟಿ ರೂ.ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಈ ಅವಧಿಯಲ್ಲಿ ದೇಶೀಯ ಹೂಡಿಕೆದಾರರು 1,800.54 ಕೋಟಿ ರೂ.ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.