ನ್ಯೂಸ್

ಇ-ಕೆವೈಸಿಗೆ ಇಂದೇ ಕೊನೇ ದಿನ; ಆಧಾರ್ ಜೋಡಣೆ ಆಗದಿದ್ದರೆ ಪಡಿತರ ಕಡಿತ

ಬೆಂಗಳೂರು: ರೇಷನ್ ಕಾರ್ಡ್​ಗೆ ಆಧಾರ್ ಜೋಡಿಸಲು (ಇ-ಕೆವೈಸಿ) ಮಂಗಳವಾರ ಕೊನೇ ದಿನ. ಮುಂದಿನ ಹಂತದಲ್ಲಿ ಪಡಿತರ ವಿತರಣೆಯನ್ನೇ ತಾತ್ಕಾಲಿಕವಾಗಿ ತಡೆಹಿಡಿಯಲು ಸರ್ಕಾರ ತೀರ್ವನಿಸಿದೆ. ಈವರೆಗೆ ಶೇ.70 ಇಕೆವೈಸಿ ಪ್ರಕ್ರಿಯೆ ಮುಗಿದಿದ್ದು, ಸಂಪೂರ್ಣಗೊಂಡರೆ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ. ಉಳಿತಾಯವಾಗಲಿದೆ.

ರಾಜ್ಯದಲ್ಲಿ 10,92,632, ಅಂತ್ಯೋದಯ, 1,15,34,599 ಬಿಪಿಎಲ್ ಮತ್ತು 21,17,054 ಎಪಿಎಲ್ ಸೇರಿ ಒಟ್ಟು 1,47,44,285 ಕಾರ್ಡ್​ಗಳಿದ್ದು, 5,05,48,836 ಸದಸ್ಯರಿದ್ದಾರೆ. ಕಳೆದ 5 ವರ್ಷಗಳಲ್ಲಿ ಅಂದಾಜು 10 ಲಕ್ಷ ಫಲಾನುಭವಿಗಳು ಮೃತಪಟ್ಟಿರುತ್ತಾರೆ. ಅವರ ಕುಟುಂಬದವರು ಸತ್ತಿರುವ ಫಲಾನುಭವಿಗಳ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದಾರೆ. ಹೀಗಾಗಿ, ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ-2013 ಪ್ರಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ 2019ರ ಜು.19ರಂದು ಪಡಿತರ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯರೂ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪ್ರಕ್ರಿಯೆ ಹೇಗೆ?: ರೇಷನ್ ಕಾರ್ಡ್​ನಲ್ಲಿರುವ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರವು ಪ್ರತಿ ಫಲಾನುಭವಿಯ ದೃಢೀಕರಣಕ್ಕೆ 5 ರೂ.ನಂತೆ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸುತ್ತದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕು. ಎಲ್ಲ ಫಲಾನುಭವಿಗಳು ಗ್ಯಾಸ್ ಸಂಪರ್ಕದ ಮಾಹಿತಿ ನೀಡಬೇಕು.