| ಆರ್. ತುಳಸಿಕುಮಾರ್
ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆ ಜಾಲ ವಿಸ್ತಾರಗೊಂಡಂತೆ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಉತ್ಪಾದಕರು, ಮಾರಾಟಗಾರರು ಹೊಸ ಮಾದರಿ, ವಿನ್ಯಾಸಗಳಲ್ಲಿ ಉತ್ಪನ್ನಗಳನ್ನು ಜನರ ಮುಂದಿಡುತ್ತಿದ್ದಾರೆ. ಧಾವಂತದಲ್ಲಿ ದೋಷಪೂರಿತ ಅಥವಾ ಕಳಪೆ ವಸ್ತುಗಳನ್ನು ಖರೀದಿಸಿ ನಂತರ ಗೊಣಗಿ ಸುಮ್ಮನಾಗುವ ಜನರೇ ಹೆಚ್ಚು. ಹಕ್ಕುಗಳ ವಿಚಾರದಲ್ಲಿ ಅರಿವು ಇಲ್ಲದಿರುವುದೇ ಈ ಸ್ಥಿತಿಗೆ ಕಾರಣ. ಖರೀದಿಸಿದ ವಸ್ತುಗಳಿಗೆ ರಸೀದಿ ಪಡೆಯುವ ಗೋಜಿಗೂ ಕೆಲವರು ಹೋಗುವುದಿಲ್ಲ. ಮನೆಗೆ ಮರಳಿ ಪೊಟ್ಟಣ ಬಿಚ್ಚಿದ ನಂತರ ಕಳಪೆ ವಸ್ತು ಕಂಡು ಹೌಹಾರುತ್ತಾರೆ. ಇವುಗಳನ್ನು ವಾಪಸ್ ಮಾಡಲು ರಸೀದಿ ಅತ್ಯಗತ್ಯ. ಆದರೆ, ಖರೀದಿ ವೇಳೆ ರಸೀದಿ ಪಡೆಯದ ತಪ್ಪಿಗೆ ವಾಪಸ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತದೆ.
ಕಾನೂನು ಬಲ: ಕಳಪೆ ಉತ್ಪನ್ನ, ಅಸಮರ್ಪಕ ಸೇವೆ ವಿರುದ್ಧ ಜನರು ನೇರವಾಗಿ ಗ್ರಾಹಕ ಆಯೋಗದ ಮೊರೆ ಹೋಗಬಹುದಾಗಿದೆ. ಖರೀದಿಸಿದ ವಸ್ತುಗಳ ವಿವರದೊಂದಿಗೆ ದೂರು ದಾಖಲಿಸಿದರೆ ಕಾಲಮಿತಿಯಲ್ಲಿ ಪರಿಹಾರ ಸಿಗುತ್ತದೆ. ಇದಕ್ಕೆ ಕಾನೂನು ಬಲ ಇರುವುದರಿಂದ ಹಕ್ಕು ಚಲಾವಣೆಗೆ ಹಿಂದೇಟು ಹಾಕಬೇಕಿಲ್ಲ. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ವೇದಿಕೆಗಳು ಸಕ್ರಿಯವಾಗಿವೆ. ಆನ್ಲೈನ್ ಮೂಲಕವೂ ದೂರು ನೀಡಬಹುದು.
ಆರು ಮೂಲಭೂತ ಹಕ್ಕುಗಳು
ಗ್ರಾಹಕರ ರಕ್ಷಣಾ ಕಾಯ್ದೆಯಡಿ 6 ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಸುರಕ್ಷತೆಯ ಹಕ್ಕು, ಆಯ್ಕೆ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆ ನಿವಾರಿಸುವ ಹಕ್ಕು ಹಾಗೂ ಗ್ರಾಹಕ ಜಾಗೃತಿ ಹಕ್ಕು.
37 ವರ್ಷಗಳ ಇತಿಹಾಸ
ಕೇಂದ್ರ ಸರ್ಕಾರ ರೂಪಿಸಿದ ಗ್ರಾಹಕರ ರಕ್ಷಣಾ ಕಾಯ್ದೆಗೆ 1986ರ ಡಿ. 24ರಂದು ರಾಷ್ಟ್ರಪತಿ ಅಂಕಿತ ಹಾಕಿದರು. ಆ ದಿನವನ್ನೇ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಪ್ರತಿ ರಾಜ್ಯದಲ್ಲಿ ಆ ದಿನ, ವಾರ ಅಥವಾ ಪಾಕ್ಷಿಕ ಅವಧಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. (ಮಾ. 15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತಿದೆ).
ಇ-ಕಾಮರ್ಸ್ ಕ್ಷೇತ್ರಕ್ಕೂ ಅನ್ವಯ
ಆನ್ಲೈನ್ ಶಾಪಿಂಗ್ ಮೂಲಕ ಪಾರ್ಸೆಲ್ನಲ್ಲಿ ಬಂದ ವಸ್ತು ಕಳಪೆಯಾಗಿದ್ದರೆ, ವಾಪಸ್ ಪಡೆಯಲು ಕಂಪನಿ ಒಪ್ಪದಿದ್ದರೆ, ಆ ಪ್ರಕರಣವನ್ನೂ ಗ್ರಾಹಕ ವೇದಿಕೆಗೆ ಒಯ್ಯಬಹುದು. ಇದಕ್ಕಾಗಿ 2019ರಲ್ಲಿ ರೂಪಿಸಿರುವ ಹೊಸ ಗ್ರಾಹಕ ರಕ್ಷಣಾ ಕಾಯ್ದೆಯಡಿ ಇ-ಕಾಮರ್ಸ್ನ್ನೂ ಸೇರಿಸಲಾಗಿದೆ.
ಗಮನಿಸಬೇಕಾದ ಅಂಶಗಳಿವು...
* ಉತ್ಪನ್ನದ ಗುಣಮಟ್ಟ ನಿರ್ಧರಿಸುವ ಬಿಐಎಸ್, ಅಗ್ವಾರ್ಕ್, ಹಾಲ್ವಾರ್ಕ್ ಬಗ್ಗೆ ಮಾಹಿತಿ ಇರಲಿ.
* ಖರೀದಿಸಿದ ಸರಕು ಹಾಗೂ ಪಡೆದ ಸೇವೆಗೆ ರಶೀದಿಯನ್ನು ಕೇಳಿ ಪಡೆಯಿರಿ.
* ಭಾರಿ ರಿಯಾಯಿತಿ, ನಕಲಿ ಜಾಹೀ ರಾತು, ಸುಳ್ಳು ಉಡುಗೊರೆಗಳ ಕೊಡುಗೆಗೆ ಬಲಿಯಾಗಬೇಡಿ.
* ಕಲಬೆರಕೆ, ಕಾಳಸಂತೆ, ಕಳ್ಳಸಾಗಣೆ ವಸ್ತುಗಳನ್ನು ಖರೀದಿಸಬೇಡಿ, ಕಾನೂನುಬದ್ಧ ಸರಕನ್ನೇ ಖರೀದಿಸಿ.
* ಕಡಿಮೆ ಬೆಲೆಗೆ ಆಸೆ ಪಟ್ಟು ಅವಧಿ ಮುಗಿದ, ದಿನಾಂಕ ನಮೂದಿಸದ, ಪರಿಶುದ್ಧತೆ ಇಲ್ಲದ ಉತ್ಪನ್ನಗಳನ್ನು ಖರೀದಿಸಬೇಡಿ.
* ಸರಕುಗಳಲ್ಲಿ ನ್ಯೂನತೆ ಕಂಡುಬಂದರೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಲು ಸಿದ್ಧರಿರಬೇಕು.