ನ್ಯೂಸ್

ಇಂದು ಗುರು ಪೂರ್ಣಿಮೆ; ಅರಿವಿನ ಮಹಾಬೆಳಕು

ಮೋಹನ್​ ಶೆಟ್ಟಿ

ಪ್ರತಿಯೊಬ್ಬರ ಬದುಕಲ್ಲೂ ವಿಶಿಷ್ಟ ಘಟನೆಗಳು, ಅನುಭವಗಳು ಮಹತ್ವದ ಪಾತ್ರ ವಹಿಸಿರುತ್ತವೆ. ಬದುಕಿಗೆ ದಿಕ್ಕು ತೋರಿದ, ಅರಿವು ತುಂಬಿದವರನ್ನು ಗುರುಸ್ವರೂಪದಲ್ಲಿ ಕಾಣುವುದು ಭಾರತೀಯ ಸಂಸ್ಕೃತಿಯ ಹೆಗ್ಗುರುತು. ಗುರು ಪೂರ್ಣಿಮೆ ಸಂದರ್ಭದಲ್ಲಿ ನಾಡಿನ ವಿವಿಧ ರಂಗಗಳ ಗಣ್ಯರು ತಮ್ಮ ಬದುಕಿನ ಗುರುಗಳನ್ನು ಸ್ಮರಿಸಿ, ಅನುಭವದ ಬುತ್ತಿಯನ್ನು ಹಂಚಿಕೊಂಡಿದ್ದಾರೆ.

ಜೀವನಪಾಠಗಳ ಮೆಲುಕು

ಗುರುಗಳನ್ನು ದೇವರ ಸಮಾನ ಎಂದು ಪರಿಗಣಿಸಿರುವ ಉನ್ನತ ಆದರ್ಶದ ಸಂಸ್ಕೃತಿ ನಮ್ಮದು. ನಮ್ಮೆಲ್ಲರ ಜೀವನದಲ್ಲಿ ಗುರುಗಳ ಮಹತ್ವ ಬಹಳ ದೊಡ್ಡದು. ಗುರುಗಳು ಶಿಷ್ಯರಿಗೆ ಜ್ಞಾನ, ಮಾರ್ಗದರ್ಶನ, ಜೀವನಪಾಠಗಳನ್ನು ಕಲಿಸುತ್ತಾರೆ. ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ನನ್ನ ಮನಶಾಸ್ತ್ರ ವಿಷಯದ ಗುರುಗಳಾಗಿದ್ದ ಡಾ.ಮಧು ಅವರನ್ನು ಸ್ಮರಿಸಬಯಸುತ್ತೇನೆ. ನನಗೆ ಜೀವನದ ಪಾಠಗಳನ್ನು ಕಲಿಸಿದವರಲ್ಲಿ ಅವರ ಪಾತ್ರ ಮಹತ್ವದ್ದು. ಜನರಿಗೆ ‘ಇಲ್ಲ’ (ನೋ) ಎನ್ನುವುದು ಹೇಗೆ ಎಂಬುದು ಅವರು ಹೇಳಿಕೊಟ್ಟ ಪ್ರಮುಖ ಪಾಠಗಳಲ್ಲಿ ಒಂದು. ಅದನ್ನು ದೃಢತೆ ಎನ್ನುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಸುತ್ತಲಿನ ಜನರಿಗೆ ಇಲ್ಲ ಎನ್ನಲಾಗದೆ ನಮ್ಮ ಇಚ್ಛೆಗೆ ವಿರುದ್ಧವಾಗಿ, ಅದರ ಪರಿಣಾಮಗಳ ಅರಿವೂ ಇಲ್ಲದೆ ‘ಆಗಲಿ’ ಎಂದಿರುತ್ತೇವೆ. ಇಂಥ ಪರಿಸ್ಥಿತಿಗಳನ್ನು ನಿಭಾಯಿಸುವುದನ್ನು ಅವರು ತಿಳಿಸಿಕೊಟ್ಟಿದ್ದಾರೆ.

ಅವರಿಂದ ಕಲಿತ ಮತ್ತೊಂದು ಮುಖ್ಯಪಾಠ ಸಮಾನತೆ. ಒಬ್ಬ ಮಹಿಳೆಯಾಗಿ ನಮ್ಮನ್ನು ಸಮಾನವಾಗಿ ಕಾಣದಿರುವ ಅನೇಕ ಸನ್ನಿವೇಶಗಳನ್ನು ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತೇವೆ. ಇಂಥ ಪರಿಸ್ಥಿತಿಗಳಲ್ಲಿ ಅದನ್ನು ನಾವು ವಿಧಿ ಎಂದು ಒಪ್ಪಿಕೊಳ್ಳುತ್ತೇವೆಯೋ ಅಥವಾ ಅದನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯು ತ್ತೇವೆಯೋ? ನಮ್ಮ ದೇಶದ ಸಂವಿಧಾನವು ನಮಗೆ ಸಮಾನತೆಯ ಹಕ್ಕನ್ನು ನೀಡಿದೆ, ಆದರೆ ಸಮಾಜ ಅದನ್ನು ನಿರಾಕರಿಸುತ್ತದೆ. ಹಾಗಾದರೆ ಮತ್ತೊಬ್ಬರನ್ನು ವಿರೋಧಿಸದೆ, ಯಾವ ಕಾರ್ಯತಂತ್ರವನ್ನು ಬಳಸಿಕೊಂಡು ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ತಿಳಿಸಿಕೊಟ್ಟವರು ನನ್ನ ಗುರುಗಳು. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿರಬೇಕು. ಸರಿ-ತಪ್ಪುಗಳ ಬಗ್ಗೆ ಅರ್ಥಮಾಡಿಕೊಂಡಾಗ ತಪ್ಪು ಮಾಡಿದವರನ್ನು ಎದುರಿಸಲು ನಮ್ಮೊಳಗೆ ಆತ್ಮವಿಶ್ವಾಸ ಇಮ್ಮಡಿಸುತ್ತದೆ.

ಆತ್ಮವಿಶ್ವಾಸ ಗಳಿಸಲು ನಮ್ಮೊಂದಿಗೆ ನಾವು ಮಾತನಾಡುವುದು, ಕನ್ನಡಿಯಲ್ಲಿ ನಮ್ಮ ಕಣ್ಣುಗಳನ್ನು ದಿಟ್ಟಿಸಿ ನೋಡು ವಂಥ ಕೆಲವು ವ್ಯಕ್ತಿತ್ವ ವಿಕಸನದ ವ್ಯಾಯಾಮಗಳನ್ನು ಮಾಡಬೇಕು ಎಂದು ತಿಳಿಸಿಕೊಟ್ಟ ಮಹನೀಯರು ನನ್ನ ಗುರುಗಳು. ಬದುಕನ್ನು ಬಂದಂತೆ ಸ್ವೀಕಾರ ಮಾಡುವ ಗುಣವನ್ನೂ ಅವರು ಕಲಿಸಿಕೊಟ್ಟರು. ಬಹಳಷ್ಟು ಸಂದರ್ಭಗಳಲ್ಲಿ ಬದುಕಿನಲ್ಲಿ ನಾವು ಯೋಜಿಸಿದೇ ಇರುವ ಹಲವಾರು ಘಟನೆಗಳು ನಡೆಯುತ್ತವೆ. ಎಷ್ಟೇ ತಯಾರಿ ಮಾಡಿಕೊಂಡಿದ್ದರೂ ನಾವು ಎಣಿಸಿದಂತೆ ನಡೆಯುವುದಿಲ್ಲ. ಆಗ ಅದರ ಬಗ್ಗೆಯೇ ಚಿಂತಿಸಿ ಅದು ಹೀಗಾಗಬಾರದಿತ್ತು ಎಂದು ಕೊರಗುವುದು ಅಥವಾ ನಡೆದದ್ದನ್ನು ಘನತೆಯಿಂದ ಒಪ್ಪಿ ಕೊಂಡು ಮುಂದುವರಿಯುವ ಆಯ್ಕೆ ನಮ್ಮದಾಗಿರುತ್ತದೆ ಎನ್ನುವ ಜೀವನಪಾಠವನ್ನು ಅವರಿಂದ ಕಲಿತಿದ್ದೇನೆ.

ಜೀವನ ರೂಪಿಸಿದ ಅಪ್ಪ, ಅಮ್ಮ

| ಅಶೋಕ್ ಜಯರಾಂ, ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ

ಗುರು ಪೂರ್ಣಿಮೆ ಎನ್ನುವುದು ಹಿಂದುಗಳ ಪಾಲಿಗೆ ವಿಶೇಷ. ತಮ್ಮ ಬದುಕನ್ನೇ ಬದಲಾಯಿಸಿದವರನ್ನು ಗುರು ಸ್ಥಾನದಲ್ಲಿ ನೋಡುವುದರ ಜತೆಗೆ ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ನನಗೆ ತಂದೆ, ತಾಯಿಯೇ ಮಹಾಗುರುಗಳಾಗಿದ್ದಾರೆ. ಹಣ ಅಥವಾ ಅಧಿಕಾರದ ಹಿನ್ನೆಲೆಯಿಲ್ಲದ ನನ್ನ ತಂದೆ ಎಸ್.ಡಿ.ಜಯರಾಂ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಗುರುತಿಸಿಕೊಂಡವರು. ಸಾಮಾಜಿಕ ಚಟುವಟಿಕೆ, ಸಂಘಟನೆ, ರೈತಪರ ಹೋರಾಟದ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹಲವರು ನಮ್ಮ ತಂದೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದಾಗ ಸಾರ್ಥಕ ಎನಿಸುತ್ತದೆ. ಎರಡು ಬಾರಿ ಶಾಸಕರಾದರೂ ಎಂದಿಗೂ ಅಧಿಕಾರಕ್ಕೆ ಅಂಟಿಕೊಳ್ಳದೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದರು. ಅವರ ನಾಯಕತ್ವವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಗುಣಗಳು ನನ್ನ ಜೀವನಕ್ಕೆ ದೊಡ್ಡ ಮಾರ್ಗದರ್ಶನ ನೀಡಿವೆ.

ಆ ವ್ಯಕ್ತಿತ್ವವನ್ನು ಮಾದರಿಯಾಗಿಟ್ಟುಕೊಂಡು ಜನರೊಡನೆ ಬೆರೆಯುತ್ತಿದ್ದೇನೆ. ತಂದೆ ತೀರಿ ಹೋದ ನಂತರ ತಾಯಿ ಪ್ರಭಾವತಿ ಜಯರಾಂ ಅವರು ನಮಗೆ ಸ್ವಾಭಿಮಾನದ ಬದುಕನ್ನು ತೋರಿಸಿಕೊಟ್ಟರು. ಮಂಡ್ಯ ವಿಧಾನಸಭಾ ಕ್ಷೇತ್ರದ ಜನರು ಅವರನ್ನು ಶಾಸಕರಾಗಿ ಆಯ್ಕೆ ಮಾಡಿದರು. ನನ್ನ ತಂದೆ ಹೆಸರು ಹಾಗೂ ಘನತೆಗೆ ಎಲ್ಲಿಯೂ ಚ್ಯುತಿ ಬರದಂತೆ ಜೀವನ ನಡೆಸಿದ ದಿಟ್ಟ ಮಹಿಳೆ. ನಮ್ಮ ವಿದ್ಯಾಭ್ಯಾಸದ ಜತೆಗೆ ಜೀವನಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡರು. ಆದ್ದರಿಂದ ನನ್ನ ತಂದೆ, ತಾಯಿ ಎಂದಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಅವರಿಬ್ಬರಿಂದ ಕಲಿತುಕೊಂಡಿರುವ ಗುಣವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡು ನನ್ನಿಂದಾಗುವ ಸೇವೆಯನ್ನು ಮಾಡುತ್ತಿದ್ದೇನೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಆಧ್ಯಾತ್ಮಿಕ ಆಚಾರಗಳನ್ನು ಹೇಳಿಕೊಟ್ಟಂಥ ಮೈಸೂರು ರಾಮಕೃಷ್ಣ ಆಶ್ರಮದ ಎಲ್ಲ ಗುರುಗಳನ್ನೂ, ಉನ್ನತ ಶಿಕ್ಷಣಕ್ಕೆ ಆಸರೆಯಾದ ವಿದೇಶಿ ವಿವಿಯ ಗುರುಗಳನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ವಿಶ್ವವೇ ಬೆಂಗಳೂರಿನತ್ತ ಕಣ್ಣಿಟ್ಟಿದೆ. ಈ ಮಹಾನಗರವು ಸಿಲಿಕಾನ್ ಸಿಟಿಯಾಗಿ ಬೆಳೆಯಲು ಮೂಲಕ ಕಾರಣೀಕರ್ತರಾದ ನಾಡಪ್ರಭು ಕೆಂಪೇಗೌಡರನ್ನು, ಒಕ್ಕಲಿಗ ಸಂಘವನ್ನು ಹುಟ್ಟುಹಾಕಿ, ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಕೆ.ಎಚ್.ರಾಮಯ್ಯ ಅವರನ್ನು ನಮಿಸುತ್ತೇನೆ.

ಬಡಾಭಾಯಿ ಕಲಾಂ

| ಪ್ರಹ್ಲಾದ ರಾಮರಾವ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಮಾಜಿ ನಿರ್ದೇಶಕ

ಗುರುಪೂರ್ಣಿಮೆ ಸಂದರ್ಭದಲ್ಲಿ ಇಬ್ಬರು ಗುರುಗಳನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಒಬ್ಬರು ಲಕ್ಷ್ಮೀನಾರಾಯಣ ಶಾಸ್ತ್ರಿಗಳು ಮತ್ತು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ. ನಾನು ಹುಡುಗನಾಗಿದ್ದಾಗ ಮಾರ್ಗದರ್ಶಕರಾಗಿ ಸಲಹಿದವರು ಲಕ್ಷ್ಮೀನಾರಾಯಣ ಶಾಸ್ತ್ರಿಯವರು. ಇಂದಿಗೂ ಗುರು ಎಂದಾಗ ಕಚ್ಚೆಪಂಚೆ ಉಟ್ಟ ಹಸನ್ಮುಖಿ, ನಿಷ್ಕಲ್ಮಷ ಮಾತಿನ ಸಮಾಧಾನಿ, ತೇಜಸ್ಸಿನ ಸ್ವರೂಪದ ಶಾಸ್ತ್ರಿಗಳ ರೂಪವೇ ಕಣ್ಣ ಮುಂದೆ ಬರುತ್ತದೆ. ಅವರನ್ನು ನೋಡಿದರೆ ಭಕ್ತಿ ಬರುತ್ತಿತ್ತು. ಮಹಾ ಮೇಧಾವಿಗಳು, ಅಪಾರ ಜ್ಞಾನಸಂಪತ್ತು ಹೊಂದಿದ್ದರು. ನನಗೆ ಅಮರಕೋಶ ಕಲಿಸಿ ಜೀವನಪಾಠ ಹೇಳಿದರು. ಸಂಸ್ಕೃತ ಮತ್ತು ಸಂಸ್ಕೃತಿ ಹೇಳಿಕೊಟ್ಟರು. 7-9ನೇ ತರಗತಿಯ ಸಂದರ್ಭದಲ್ಲಿ ಅವರು ಹಾಕಿಕೊಟ್ಟ ಹಾದಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ನನ್ನ ಬೆಳವಣಿಗೆಗೆ ಅವರ ಮಾರ್ಗದರ್ಶನವೇ ಪ್ರಮುಖ ಕಾರಣ. ವೃತ್ತಿಜೀವನಕ್ಕೆ ಬಂದ ಮೇಲೆ ನನ್ನ ಗುರುಗಳಾದವರು ಮಾಜಿ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು. ನನ್ನ ಹಾದಿಯಲ್ಲಿ ಪ್ರಧಾನಪಾತ್ರ ವಹಿಸಿದರು.

ಮೆಂಟರ್ ಕೂಡ ಅವರೇ. ಅವರು ನನ್ನ ಪಾಲಿಗೆ ‘ಬಡಾಭಾಯಿ’ಯೂ ಹೌದು. ನಾಯಕತ್ವದ ಗುಣ ಕಲಿಸಿದರು. ಮ್ಯಾನೇಜ್​ವೆುಂಟ್ ಲೀಡರ್​ಶಿಪ್, ಸೈನ್ಸ್ ಲೀಡರ್​ಶಿಪ್, ತಂತ್ರಜ್ಞಾನ ಲೀಡರ್​ಶಿಪ್ ಜತೆ ಎಲ್ಲರೊಂದಿಗೆ ಹೇಗೆ ಹೊಂದಿಕೊಂಡು ನಡೆಯಬೇಕು, ಕಷ್ಟದ ಕೆಲಸದ ಸಂದರ್ಭದಲ್ಲಿ ನಾಯಕತ್ವ ಹೇಗಿರಬೇಕೆಂಬುದನ್ನೂ ಅವರು ಹೇಳಿಕೊಟ್ಟಿದ್ದಾರೆ. ಅಬ್ದುಲ್ ಕಲಾಂ ಅವರ ಮಾರ್ಗದರ್ಶದನಲ್ಲಿ ದೇಶದ ಪ್ರಮುಖಾತಿ ಪ್ರಮುಖ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ಸಿಕ್ಕಿತು. ಪ್ರಯತ್ನಗಳು ವಿಫಲವಾದಾಗ ಕಲಾಂ ತೋರಿದ ನೈತಿಕ ಬಲ, ಪ್ರೀತಿ, ಔದಾರ್ಯ ಎಲ್ಲವೂ ನೆನಪಿನಲ್ಲಿ ಹಚ್ಚಹಸಿರಾಗಿದೆ. ಇಂತಹ ಮಾರ್ಗದರ್ಶಕ ಸಿಗುವುದು ಅನನ್ಯ. ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ಸೋಲು ಬಂದಾಗ ಹೇಗೆ ಎದುರಿಸಬೇಕು, ಯಶಸ್ಸು ಸಿಕ್ಕಾಗ ಅದರಲ್ಲಿ ಎಲ್ಲರ ಕೊಡುಗೆಯನ್ನು ಹೇಗೆ ಎತ್ತಿತೋರಿಸಬೇಕೆಂಬುದಕ್ಕೆ ಕಲಾಂ ಅವರಿಗಿಂತ ದೊಡ್ಡ ಉದಾಹರಣೆ ಬೇರೆ ಇಲ್ಲ. ವಿಶೇಷವಾಗಿ ಭಾರತದ ಕ್ಷಿಪಣಿ ಅಭಿವೃದ್ಧಿಯ ಸಮಯದಲ್ಲಿ ಕಲಾಂ ಅವರು ಆಕಾಶ್ ಕ್ಷಿಪಣಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ನನ್ನನ್ನು ಆಯ್ಕೆ ಮಾಡಿದರು, ಅವರ ಮಾರ್ಗದರ್ಶನ ಮತ್ತು ಸಹಯೋಗವು ಆಕಾಶ್ ಕ್ಷಿಪಣಿ ವ್ಯವಸ್ಥೆಯ ಯಶಸ್ಸಿಗೆ ನಿರ್ಣಾಯಕವಾಗಿತ್ತು. ಕಲಾಂ ಅವರ ಸ್ಪೂರ್ತಿ ಮತ್ತು ಮಾರ್ಗದರ್ಶನ ನನ್ನ ಪಾಲಿಗೆ ಸುಯೋಗವೇ ಸರಿ.

ಗುರುಪರಂಪರೆಯ ಕೃಪೆ

| ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ನನ್ನ ಬದುಕಿನಲ್ಲಿ ಏನಾದರೂ ಪ್ರೇರಣೆ ಆಗಿದ್ದರೆ, ಅದು ಗುರುಗಳಿಂದಲೇ ಆಗಿದೆ. ನನ್ನ ಸುದೀರ್ಘ ಹೋರಾಟದ ಜೀವನದಲ್ಲಿ ಗುರುಗಳ ಪಾತ್ರವೇ ಬಹಳ ಪ್ರಮುಖವಾಗಿದೆ. ನನಗೆ ದೈವದ ಮೇಲೆ ಅಪಾರ ನಂಬಿಕೆ ಇರುವುದರಿಂದ ಮತ್ತು ಗುರುಗಳ ಆಶೀರ್ವಾದದಿಂದ ಇಷ್ಟು ವರ್ಷ ಬದುಕಿದ್ದೇನೆ. 92 ವಸಂತಗಳನ್ನು ಕಂಡಿದ್ದೇನೆ ಎಂದರೆ ಅದು ಗುರು ಪ್ರೇರಣೆಯಿಂದ. ನನಗೆ ಮೊದಲು ಗುರುಗಳ ಪ್ರೇರಣೆ ಆಗಿದ್ದು ಶೃಂಗೇರಿ ಜಗದ್ಗುರುಗಳಿಂದ. ಸುಮಾರು 60 ವರ್ಷಗಳ ಹಿಂದೆ ಪೀಠಾಧಿಕಾರಿಯಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿ ಅವರನ್ನು ಶೃಂಗೇರಿಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ. ಆಗ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರು ಇನ್ನೂ ಪಟ್ಟಕ್ಕೆ ಬಂದಿರಲಿಲ್ಲ. ಶೃಂಗೇರಿ ಶ್ರೀಗಳು ಜಿಂಕೆಯನ್ನು ಮುದ್ದಾಡುತ್ತಿರುವ ಪೋಟೋ ಈಗಲೂ ನನ್ನ ಮನೆಯಲ್ಲಿ ಇದೆ.

ಮೊದಲು ಶಾಸಕನಾಗಿ 1962ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಶೃಂಗೇರಿ ಪೀಠಕ್ಕೆ ಮೊದಲು ಭೇಟಿ ನೀಡಿ, ಆಗಿನ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಗಳಿಗೆ ನಮಸ್ಕರಿಸಿ, ಆ ಮೇಲೆ ವಿಧಾನಸೌಧಕ್ಕೆ ಹೋಗಿದ್ದೆ. ಆ ನೆನಪು ನನಗೆ ಈಗಲೂ ಅಚ್ಚಳಿಯದಂತೆ ಇದೆ. ಶೃಂಗೇರಿ ಪೀಠಕ್ಕೆ ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಪೀಠಾಧಿಕಾರಿಯಾದ ಮೇಲೂ ನಮ್ಮ ಕುಟುಂಬದ ಅವಿನಾಭವ ಸಂಬಂಧ ಮಠದೊಂದಿಗೆ ಹಾಗೆಯೇ ಮುಂದುವರಿದಿದೆ. ನನ್ನ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಆದಿಯಾಗಿ ಕುಟುಂಬದವರೆಲ್ಲ ಶೃಂಗೇರಿಪೀಠಕ್ಕೆ ನಡೆದುಕೊಳ್ಳುತ್ತಾರೆ. ಹಾಗಾಗಿಯೇ ನನಗೆ ಈಗಲೂ ಶೃಂಗೇರಿ ಮಠದ ಸ್ವಾಮೀಜಿಗಳು ಅಧ್ಯಾತ್ಮ ದಾರಿ ತೋರಿದ ಗುರುಗಳು ಎಂದು ಸ್ಮರಣೆ ಮಾಡುತ್ತೇನೆ.

ಆದಿಚುಂಚನಗಿರಿ ಮಠಕ್ಕೆ ಈ ಹಿಂದೆ ಪೀಠಾಧಿಕಾರಿಯಾಗಿದ್ದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಮಾರ್ಗದರ್ಶನ ಮಾಡಿದ ಗುರುಗಳು. ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಈಗಿನ ಪೀಠಾಧಿಕಾರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವುಧೂತ ಸ್ವಾಮೀಜಿ ಅವರ ಪಾತ್ರ ದೊಡ್ಡದಿದೆ. ನನ್ನ ಬದುಕಿನಲ್ಲಿ ಪ್ರೇರಣೆ ನೀಡಿದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠ ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿ, ಈಗ ಪಟ್ಟದಲ್ಲಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರುಗಳನ್ನು ಮರೆಯಲು ಸಾಧ್ಯವಿಲ್ಲ. ಈ ಪೀಠಗಳ ಆಶೀರ್ವಾದ ಅಂದಿನಿಂದಲೂ ಇದೆ. ನನ್ನ ರಾಜಕೀಯ ಜೀವನ, ಅಧ್ಯಾತ್ಮ, ವ್ಯವಹಾರಿಕ ಬದುಕಿನಲ್ಲಿ ಈ ಮೂರು ಮಠದ ಸ್ವಾಮೀಜಿಗಳ ಮಾರ್ಗದರ್ಶನವಿದೆ. ಅವರನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ರಾಜಕೀಯ ಜೀವನದಲ್ಲಿ ಗುರುಪರಂಪರೆಯ ಮಠಗಳ ಪಾತ್ರವೇ ಪ್ರಧಾನವಾಗಿದೆ. ನನ್ನ ಬದುಕು ಸಮೃದ್ಧಗೊಳಿಸಿ ಅರ್ಥಪೂರ್ಣವಾಗಿಸಿದ ಶ್ರೀ ಗುರುಪರಂಪರೆ ಪೀಠಗಳಿಗೆ ನಮನಗಳು.

ಅಜ್ಜಿಯೆಂಬ ಮಹಾಗುರು

| ದೀಪಾ ಭಾಸ್ತಿ, ಬುಕರ್ ಪ್ರಶಸ್ತಿ ಪುರಸ್ಕೃತ ಅನುವಾದಕಿ, ಲೇಖಕಿ

ಮೂರು, ನಾಲ್ಕು ತಿಂಗಳುಗಳ ಹಿಂದಿನವರೆಗೂ ನಾನು ನನ್ನ ಅಜ್ಜಿಯನ್ನು (ಅಪ್ಪನ ಅಮ್ಮ. ಅಮ್ಮ-ಅಪ್ಪನ ತಾಯಿ-ತಂದೆಯರ ಪೈಕಿ ನಾನು ನೋಡಿದ್ದು ಇವರೊಬ್ಬರನ್ನು ಮಾತ್ರ) ನೆಂಟತನದ ದೃಷ್ಟಿಯಿಂದ ಮಾತ್ರ ಗ್ರಹಿಸಿದ್ದೆ. ಅಜ್ಜಿ ಕಡೆತನಕ ನಮ್ಮೊಟ್ಟಿಗೇ ಇದ್ದರು. ಮೊನ್ನೆ ಮೊನ್ನೆ ಯಾವುದೋ ಸಂದರ್ಶನದ ಪ್ರಶ್ನೆಗಳ ಪಟ್ಟಿಯಲ್ಲಿ ‘ನಿಮಗೆ ಪ್ರೀತಿ ಹುಟ್ಟಿಸಿದ ಪುಸ್ತಕ ಯಾವುದು?’ ಎಂಬ ಪ್ರಶ್ನೆಯಿತ್ತು. ಇದಕ್ಕೆ ಉತ್ತರ ಬರೆಯುವಾಗ ನನಗೆ ಥಟ್ಟನೆ ಹೀಗೆ ಹೊಳೆಯಿತು: ಒಂದಕ್ಷರ ಕಲಿಸಿದವರೂ ಗುರುವಾದರೆ, ಹಲವಾರು ಪ್ರಪಂಚಗಳನ್ನೇ ಕಥೆಗಳ ಮೂಲಕ ಸೃಷ್ಟಿಸಿ ಅವುಗಳ ಒಳಗೆ ಕೈ ಹಿಡಿದು ನಡೆಸಿ, ಆ ಜಗತ್ತುಗಳ ಅಂಕುಡೊಂಕುಗಳಲ್ಲಿ, ಕಾಡುಮೇಡು, ಅರಮನೆ-ಅಂತಃಪುರಗಳಲ್ಲಿ, ಪುರಾಣ-ವಾಸ್ತವಗಳಲ್ಲಿ ಓಡಾಡಲು ಹೇಳಿಕೊಟ್ಟ ಅಜ್ಜಿ ನನ್ನ ಗುರು ಮಾತ್ರವಲ್ಲ, ಮಹಾಗುರು.

ಹಿಂದೆ, ಮನುಷ್ಯರು ಅಲೆಮಾರಿಗಳಾಗಿದ್ದ ಕಾಲದಲ್ಲಿ ಗುಂಪುಗಳಲ್ಲಿ ಬೇಟೆಯಾಡುವವರು, ಗಿಡಮೂಲಿಕೆಗಳ ಔಷಧೀಯ ಗುಣಗಳನ್ನು ಗುರುತಿಸುವವರು ಎಷ್ಟು ಮುಖ್ಯರಾಗಿದ್ದರೋ, ಕಥೆಗಾರರೂ ಅಷ್ಟೇ ಮುಖ್ಯರಾಗಿದ್ದರಂತೆ. ಹಗಲು ಕಳೆದು ರಾತ್ರಿಯಾಗುವಾಗ, ಬೆಂಕಿಯ ಸುತ್ತ ಕುಳಿತು ಮೈಕಾಯಿಸುತ್ತ ಈ ಕಥೆಗಾರರು ತಮ್ಮ ಪೂರ್ವಿಕರ, ಪಕ್ಷಿಪ್ರಾಣಿ ಪ್ರಪಂಚಗಳ ಕಥೆಗಳನ್ನು ಹೇಳುತ್ತಿದ್ದರಂತೆ. ಇಂತಹ ಕಥೆಗಾರರು ಒಂದು ಗುಂಪಿನ, ಒಂದು ಜೋಡು ಕುಟುಂಬದ, ಒಂದು ಸಮುದಾಯದ ನೆನಪುಗಳನ್ನು ಕಾಪಿಟ್ಟುಕೊಳ್ಳುವ ಮತ್ತು ತಲೆಮಾರುಗಳ ಕಥೆ, ಸಂಪ್ರದಾಯಗಳನ್ನು ಕಾಪಾಡುವ ಮಾಂತ್ರಿಕರಾಗಿದ್ದರು. ನನ್ನಜ್ಜಿ ಇದೇ ಸಮುದಾಯಕ್ಕೆ ಸೇರಿದವಳಂತೆ ಕಾಣುತ್ತಾಳೆ.

ನಾನು ಚಿಕ್ಕವಳಿದ್ದಾಗಿನ ಪ್ರಸಂಗ. ಇನ್ನೇನು ಗೋಧೂಳಿ ಸಮಯ ಕಳೆದಿರುತ್ತಿತ್ತಷ್ಟೆ. ಅಜ್ಜಿಯನ್ನು ಕಥೆ ಹೇಳು ಎಂದು ಪೀಡಿಸುತ್ತಿದ್ದೆ. ಅವಳಿಗೂ ಕಥೆ ಹೇಳಬೇಕೆಂದಿರುತ್ತಿತ್ತು, ಜೊತೆಗೆ ಸುಲಭಕ್ಕೆ ಬಗ್ಗಬಾರದೆಂಬ ಹಠ. ಅವಳು ಒಮ್ಮೆ ಕಥೆ ಶುರು ಮಾಡಿದಳೆಂದರೆ ಸಾಕು, ಅಜ್ಜಿಯು ಅಜ್ಜಿಯಾಗಷ್ಟೇ ಉಳಿಯುತ್ತಿರಲಿಲ್ಲ. ಈಗ ಶಕುಂತಲೆಯ ಲಜ್ಜೆಯ ಮೆಲುದನಿ, ಆಗೊಮ್ಮೆ ದುಷ್ಯಂತನ ದರ್ಪದ ಠೀವಿ, ಅಹಂಕಾರದ ಮುಖಭಾವ ಅಜ್ಜಿಯ ಭಾವಚರ್ಯುಯಲ್ಲಿರುತ್ತಿತ್ತು. ಅವಳು ಕಥೆ ಹೇಳುತ್ತಿದ್ದ ಪರಿಗೆ ನಾನು ಜೊಲ್ಲು ಸುರಿಸುತ್ತ ನಳನ ಪಾಕಶಾಲೆಗೇ ಹೋಗಿ ಬರುತ್ತಿದ್ದೆ (ಅಜ್ಜಿ ಒಳ್ಳೆಯ ಪಾಕ ಪ್ರವೀಣೆಯಾಗಿರಲಿಲ್ಲ ಅನ್ನುವುದು ಬೇರೆ ಮಾತು!).

ದಮಯಂತಿಯು ನಮ್ಮ ತೋಟದಲ್ಲಿದ್ದ ಅಂಜೂರ ಮರದಡಿಯೇ ಹೆದರಿಕೊಂಡು ರಾತ್ರಿಯಿಡೀ ಕಳೆದಳೇನೋ ಎಂಬಂಥ ಮಾಯಾಲೋಕ ಅಜ್ಜಿ ಕಥೆಯಲ್ಲಿರುತ್ತಿತ್ತು. ಅವಳು ಕಣ್ಣರಳಿಸುವ ರೀತಿ, ಧ್ವನಿಯ ಏರಿಳಿತ, ಹಾವಭಾವ, ಕಥಾಲೋಕವೆಂಬ ಅದ್ಭುತ, ಕಥೆಗಳೆಂಬ ಮ್ಯಾಜಿಕ್ ಅನ್ನು ಕಿಂಚಿತ್ತಾದರೂ ನನ್ನ ಬರವಣಿಗೆಯಲ್ಲಿ ತರಬೇಕೆಂಬುದು ಹಲವು ವರ್ಷಗಳ ನನ್ನ ಬರವಣಿಗೆಯ ಅಭ್ಯಾಸದ ಉದ್ದೇಶ. ಮುಂದೆ ಎಂದಾದರೊಮ್ಮೆ ಅಜ್ಜಿ ಸೃಷ್ಟಿಸಿದ ಪ್ರಪಂಚದ ದನಿಗಳನ್ನು ಕೇಳಿಸಿಕೊಳ್ಳುವಾಗ ನನ್ನೊಳಗೆ ಉಂಟಾದ ಅನುಭವವು ನಾನು ಬರೆದದ್ದನ್ನು ಓದುವ ಸಹೃದಯರಲ್ಲಿಯೂ ಒಂದಿಷ್ಟು ಮೂಡಿದರೆ ಅದುವೇ ನನ್ನ ಗುರುದಕ್ಷಿಣೆ, ಅಜ್ಜಿ ಎಂಬ ಮಹಾಗುರುವಿಗೆ.