ನ್ಯೂಸ್

ಗುರುಕೃಪೆಯಿಂದ ಸಂಕಟ ನಿವಾರಣೆ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಮೋಹನ ಗೌಡ

ಇಂದು ಭಾರತದಾದ್ಯಂತ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಗುರು-ಶಿಷ್ಯ ಪರಂಪರೆ ಭಾರತದ ವಿಶೇಷತೆಯಾಗಿದೆ. ಹಿಂದೆ ರಾಷ್ಟ್ರಕ್ಕೆ ಅನೇಕ ಸಂಕಟ ಬಂದಾಗ ಗುರು-ಶಿಷ್ಯ ಪರಂಪರೆಯು ಭಾರತದ ರಕ್ಷಣೆ ಮಾಡಿದೆ.

ಕರ್ನಾಟಕದಲ್ಲಿ ಹಕ್ಕಬುಕ್ಕರು ಅವರ ಗುರುಗಳಾದ ವಿದ್ಯಾರಣ್ಯಸ್ವಾಮಿಗಳ ಮೂಲಕ ರಾಷ್ಟ್ರರಕ್ಷಣಾ ಕಾರ್ಯವನ್ನು ಮಾಡಿದರು. ಅದೇ ರೀತಿಯಲ್ಲಿ ಆರ್ಯಚಾಣಕ್ಯರು ಚಂದ್ರಗುಪ್ತನ ಮೂಲಕ, ಸಮರ್ಥ ರಾಮದಾಸರು ಶಿವಾಜಿ ಮಹಾರಾಜರು ಮೂಲಕ, ಶ್ರೀ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಮೂಲಕ, ರಾಷ್ಟ್ರರಕ್ಷಣಾ ಕಾರ್ಯವನ್ನು ಮಾಡಿದರು. ಸನಾತನಧರ್ಮ ಅವನತಿಯಲ್ಲಿರುವಾಗ ಜಗದ್ಗುರು ಶ್ರೀ ಆದಿಶಂಕರರು ಅದನ್ನು ಪುನರುಜ್ಜೀವನಗೊಳಿಸಿದರು. ಹೀಗೆ ಭಾರತದಲ್ಲಿ ಗುರು-ಶಿಷ್ಯ ಪರಂಪರೆಗೆ, ಗುರು ಪೂರ್ಣಿಮೆಗೆ ವಿಶೇಷ ಮಹತ್ವ ಇದೆ. ಪ್ರತಿಯೊಂದು ಆಶ್ರಮ, ಸಂಪ್ರದಾಯ, ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಶ್ರೀ ಆದಿಶಂಕರಾಚಾರ್ಯರ ಪರಂಪರೆಯಲ್ಲಿ ಇದೇ ದಿನ ಸಂನ್ಯಾಸಿಗಳು ಚಾತುರ್ವಸ್ಯ ವ್ರತಾಚರಣೆ ಪ್ರಾರಂಭಿಸುತ್ತಾರೆ.

ಗುರುಪೂರ್ಣಿಮೆಯ ಉದ್ದೇಶ: ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಗುರು ಎಂಬುದು ತತ್ವ. ಸನಾತನಧರ್ಮದಲ್ಲಿ ಗುರುವನ್ನು ಈಶ್ವರನ ಸಗುಣರೂಪ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಗುರುಗಳು ಶಿಷ್ಯರಿಗೆ ಅಧ್ಯಾತ್ಮ ಬೋಧೆ ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಣೆಯ ಹಿಂದಿನ ಉದ್ದೇಶ. ಇತರ ದಿನಗಳಿಗೆ ಹೋಲಿಸಿದರೆ ಗುರುಪೂರ್ಣಿಮೆಯಂದು ಗುರುತತ್ತ್ವವು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆ ಈಶ್ವರೀಕೃಪೆಯ ಪರ್ವಕಾಲವೇ ಆಗಿದೆ.

ಆಚರಿಸುವ ಪದ್ಧತಿ: ಈ ದಿನ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಎಲ್ಲ ಶಿಷ್ಯರು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಈ ದಿನ ವ್ಯಾಸಪೂಜೆಯನ್ನು ಮಾಡುವ ಪದ್ಧತಿಯೂ ಇದೆ. ಗುರುಪರಂಪರೆಯಲ್ಲಿ ವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಎಲ್ಲ ಜ್ಞಾನದ ಉಗಮವು ವ್ಯಾಸರಿಂದಲೇ ಆಗುತ್ತದೆ ಎನ್ನುವುದು ಭಾರತೀಯರ ನಂಬಿಕೆ.

ಗುರುಪೂಜಾ ವಿಧಿ: ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ‘ಗುರುಪರಂಪರಾ ಸಿದ್ಧ್ಯರ್ಂ ವ್ಯಾಸಪೂಜಾಂ ಕರಿಷ್ಯೇ’ ಎಂದು ಸಂಕಲ್ಪ ಮಾಡುತ್ತಾರೆ. ಒಂದು ಶುಭ್ರವಸ್ತ್ರವನ್ನು ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆಗಳನ್ನು ಎಳೆಯುತ್ತಾರೆ. ಇದೇ ವ್ಯಾಸಪೀಠ. ಅನಂತರ ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದ ಭಗವತ್ಪಾದ, ಶಂಕರಾಚಾರ್ಯರನ್ನು ವ್ಯಾಸಪೀಠದ ಮೇಲೆ ಆವಾಹಿಸಿ ಅವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಈ ದಿನ ದೀಕ್ಷಾಗುರು ಹಾಗೂ ತಂದೆ-ತಾಯಿಯರ ಪೂಜೆಯನ್ನೂ ಮಾಡುವ ಪದ್ಧತಿಯಿದೆ. ಸನಾತನ ಸಂಸ್ಥೆಯ ಹಿಂದೂ ಜನಜಾಗೃತಿ ಸಮಿತಿಯು ಈ ವರ್ಷ ಎಲ್ಲರಿಗೂ ಗುರುಪೂರ್ಣಿಮೆಯ ಲಾಭ ಆಗಬೇಕೆಂದು ಇಂದು ಸಂಜೆ 5ಕ್ಕೆ ್ಛ್ಚಚಿಟಟk.ಟಞ/ಏಒಖಆಛ್ಞಿಜಚ್ಝu್ಠ ಪುಟದ ಮೂಲಕ ಗುರುಗಳ ಮಾರ್ಗದರ್ಶನವನ್ನು ಪ್ರಸಾರ ಮಾಡಲಿದೆ.

(ಆಧಾರ: ‘ಹಬ್ಬ, ಧಾರ್ವಿುಕ ಉತ್ಸವ ಮತ್ತು ವ್ರತಗಳು’)

(ಲೇಖಕರು ಬೆಂಗಳೂರು ಹಿಂದೂ ಜನಜಾಗೃತಿ ಸಮಿತಿ ಸಂಚಾಲಕರು)