ನ್ಯೂಸ್

ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಟಿಎಂಸಿ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಜುಲೈ 10ರಂದು ಮತದಾನ ನಡೆಯಲಿರುವ ನಾಲ್ಕು ಸ್ಥಾನಗಳಿಗೆ ಟಿಎಂಸಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ರಾಯಗಂಜ್ ಕ್ಷೇತ್ರದಿಂದ ಕೃಷ್ಣ ಕಲ್ಯಾಣಿ ಮತ್ತು ರಾಣಾಘಾಟ್-ದಕ್ಷಿಣ್ ಕ್ಷೇತ್ರದಿಂದ ಮುಕುತ್ ಮಣಿ ಅಧಿಕಾರಿ, ಕೋಲ್ಕತ್ತಾದ ಮಾಣಿಕ್ತಾಲಾ ಕ್ಷೇತ್ರದಿಂದ ಸುಪ್ತಿ ಪಾಂಡೆ ಹಾಗೂ ಬಾಗ್ಡಾ ಕ್ಷೇತ್ರದಿಂದ ಮಧುಪರ್ಣ ಠಾಕೂರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಯಾದ ಶಾಸಕರಾದ ಕಲ್ಯಾಣಿ, ಮುಕುತ್ ಮಣಿ ಇಬ್ಬರು ಲೋಕಸಭೆ ಚುನಾವಣೆಯಲ್ಲಿ ವಿಫಲವಾದ ನಂತರ ರಾಯ್‌ಗಂಜ್ ಮತ್ತು ರಾಣಾಘಾಟ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಅಗತ್ಯವಾಗಿತ್ತು. ಸಾಧನ್ ಪಾಂಡೆ ಅವರು 2022ರಲ್ಲಿ ವಿಧಿವಶರಾದ ನಂತರ ಮಾಣಿಕ್ತಾಲಾ ಸ್ಥಾನವು ತೆರವಾಗಿತ್ತು. ಈ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.

ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ (ಇಸಿಐ) ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯ ನಿಯೋಜನೆಯನ್ನು ಇಸಿಐ ಘೋಷಿಸಿದೆ. ಇದರಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬಾಗ್ಡಾದಲ್ಲಿ ಗರಿಷ್ಠ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್ 21 ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ. ಜುಲೈ 13ರಂದು ಮತ ಎಣಿಕೆ ನಡೆಯಲಿದೆ. (ಏಜೆನ್ಸೀಸ್​​)