ತಿರುಪತಿ: ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇಂದು ( ಸೆ.20) ತಿರುಮಲ ತಿರುಪತಿ ದೇವಸ್ಥಾನಂ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್ ಅವರು, ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅನ್ಯಧರ್ಮೀಯರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ: ಪ್ರಧಾನಿ ಮೋದಿಗೆ ಈಶ್ವರಪ್ಪ ಮನವಿ
ನಮ್ಮಲ್ಲಿ ಕಲಬೆರಕೆ ಪರೀಕ್ಷಾ ಸೌಲಭ್ಯ ಕೊರತೆಯಿಂದಾಗಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿ ಲಾಭ ಪಡೆದುಕೊಂಡಿದ್ದಾರೆ. ಆಯ್ದ ತುಪ್ಪದ ಮಾದರಿಯಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ, ಹಂದಿಯ ಕೊಬ್ಬಿನ ಅಂಶ ಇರುವುದು ಬಹಿರಂಗಗೊಂಡಿದೆ ಜೆ ಶ್ಯಾಮಲಾ ರಾವ್ ಹೇಳಿದ್ದಾರೆ.
ನಮ್ಮಲ್ಲಿ ಲ್ಯಾಬ್ ಇಲ್ಲದಿರುವುದರಿಂದ ತಪ್ಪದ ಗುಣಮಟ್ಟ ಪರೀಕ್ಷಿಸಲು ಸಾಧ್ಯವಾಗಿಲ್ಲ. ಹೊರಗಿನ ಲ್ಯಾಬ್‌ಗಳಿಗೆ ಕಳುಹಿಸುವುದರಿಂದ ಹೆಚ್ಚು ಹಣ ಖರ್ಚು ಆಗುತ್ತಿತ್ತು. ಇದರಿಂದ ತುಪ್ಪ ಪೂರೈಕೆದಾರರು ಈ ಕೊರತೆಗಳ ಲಾಭ ಪಡೆದಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಹಿಂದೆ ತುಪ್ಪ ಹಾಗೂ ಲಡ್ಡುವಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದು ರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಾಲ್ಕು ಟ್ರಕ್ ಲೋಡ್ ತುಪ್ಪವು ಉತ್ತಮ ಗುಣಮಟ್ಟದ್ದಾಗಿಲ್ಲ ಎಂದು ಕಂಡುಬಂದ ನಂತರ ತುಪ್ಪದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ತುಪ್ಪದ ಮಾದರಿಯಲ್ಲಿ ಹಂದಿನ ಕೊಬ್ಬಿನ ಆಂಶ ಇರುವುದು ದೃಢಪಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತುಪ್ಪ ಪೂರೈಕೆದಾರರ ಕಳೆಪ ಗುಣಮಟ್ಟದ ತುಪ್ಪವನ್ನು ನೀಡಿದರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್ ಎಚ್ಚರಿಕೆ ನೀಡಿದರು.
ದೇಶಾದ್ಯಂತ ಭುಗಿಲೆದ್ದ ಆಕ್ರೋಶ: ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಆಡಳಿತವು ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಪ್ರತಿಪಾದಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಕೆಎಂಎಫ್ ಸ್ಪಷ್ಟನೆ: ತಿರುಪತಿ ಲಡ್ಡು ಪ್ರಸಾದ ತಯಾರಿಗೆ ಕಳೆದ ನಾಲ್ಕು ವರ್ಷಗಳಿಂದ ಟಿಟಿಡಿ ಮಂಡಳಿ ನಮ್ಮ ಸಂಸ್ಥೆಯಿಂದ ತುಪ್ಪ ಖರೀದಿ ಮಾಡಿಲ್ಲ. ಆಂಧ್ರದಲ್ಲಿ ಇತ್ತೀಚೆಗೆ ತೆಲುಗುದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ನಂತರವಷ್ಟೇ ನಾವು ಮತ್ತೆ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸ್ಪಷ್ಟನೆ ನೀಡಿದೆ.