ನ್ಯೂಸ್

ತಿರುಪತಿಯಿಂದ ಮನೆಗೆ ಹೊರಟಿದ್ದವರ ಬದುಕಲ್ಲಿ ದುರಂತ, ಮಾರ್ಗಮಧ್ಯೆ ಪ್ರಾಣ ಹೊತ್ತೊಯ್ದ ಜವರಾಯ

ಕೋಲಾರ: ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಕಾರಿನಲ್ಲಿ ವಾಪಸ್​ ಬರುತ್ತಿದ್ದ ಕುಟುಂಬವೊಂದು ಜಮ್ಮನಹಳ್ಳಿ ಗೇಟ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತಕ್ಕೀಡಾಗಿದೆ.

ತಿರುಪತಿಯಿಂದ ಮಾಲೂರಿಗೆ ಹೊರಟಿದ್ದ ಸ್ವಿಫ್ಟ್ ಕಾರು ಮತ್ತು ಲಾರಿ ನಡುವೆ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಜಮ್ಮನಹಳ್ಳಿ ಗೇಟ್ ಬಳಿ ಅಪಘಾತವಾಗಿದೆ. ಇದನ್ನೂ ಓದಿರಿ ಬೆಳ್ಳಂಬೆಳಗ್ಗೆ ಭೀಕರ ಅಫಘಾತ, ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಘಟನೆಯಲ್ಲಿ ಮಾಲೂರು ತಾಲೂಕಿನ ಶಿವನಾಪುರ ಗ್ರಾಮದ ಪಾರ್ವತಮ್ಮ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ವೆಂಕಟೇಶ್, ಶಿಲ್ಪ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಅವರನ್ನು ಆರ್​.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ದಿನದ ಹಿಂದೆಯೂ ಇಂತಹದ್ದೇ ದುರಂತದಲ್ಲಿ ನಾಲ್ವರು ಬಲಿಯಾಗಿದ್ದರು. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಗುಂಪೊಂದು, ದರ್ಶನ ಮುಗಿಸಿ ಕಾರಿನಲ್ಲಿ ವಾಪಸ್​ ಬರುತಿತ್ತು. ಹೆದ್ದಾರಿಯಲ್ಲಿ ಕಾರು ಚಲಿಸುತ್ತಿರುವಾಗಲೇ ಚಾಲಕ ನಿದ್ರೆಗೆ ಜಾರಿ ನಿಂತಿದ್ದ ಲಾರಿಯೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.