ನ್ಯೂಸ್

ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

Mandara

ನವದೆಹಲಿ: ಟಿಕ್​ಟಾಕ್ ಸೇರಿ ಚೀನಾದ 59 ಆ್ಯಪ್​ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸೈಬರ್ ಖದೀಮರು ಟಿಕ್​ಟಾಕ್ ಪ್ರೊ ಎಂಬ ನಕಲಿ ಆ್ಯಪ್​ನ ಲಿಂಕ್​​ ಮೂಲಕ ಜನರ ಮಾಹಿತಿ ಕದಿಯುವ ಪ್ರಯತ್ನ ಮುಂದುವರಿದಿದೆ!

ಆ್ಯಪ್ ನಿಷೇಧದಿಂದಾಗಿ ಕಂಗಾಲಾಗಿರುವ ಟಿಕ್​ಟಾಕ್ ಪ್ರಿಯರು ಈ ಹೊಸ ಲಿಂಕ್ ಅನ್ನು ಕ್ಲಿಕ್ ಮಾಡಿ ಸೈಬರ್ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ವಾಟ್ಸ್​ಆ್ಯಪ್ ಮತು ಎಸ್​ಎಂಎಸ್​ಗಳ ಮೂಲಕ ಟಿಕ್​ಟಾಕ್ ಪ್ರೋ ಅಪ್ಲಿಕೇಷನ್ ಲಿಂಕ್​ಅನ್ನು ಜನರ ಮೊಬೈಲ್​ಗಳಿಗೆ ರವಾನಿಸಲಾಗುತ್ತಿದೆ. ಇದರ ಮೂಲಕ ಮಾಲ್ವೇರ್ ಅನ್ನು ಮೊಬೈಲ್​ಗಳಲ್ಲಿ ಗೊತ್ತಿಲ್ಲದಂತೆ ಇನ್​ಸ್ಟಾಲ್ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟಿಕ್​ಟಾಕ್ ಪ್ರೋ ಏನು ಕೆಲಸ ಮಾಡುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಈ ಲಿಂಕ್​ಅನ್ನು ಕ್ಲಿಕ್ ಮಾಡಿ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡಿರುವ ಕೆಲವರು ನೀಡಿರುವ ಮಾಹಿತಿ ಪ್ರಕಾರ, ಟಿಕ್​ಟಾಕ್ ಪ್ರೋ ಸಂಪೂರ್ಣವಾಗಿ ಯಾವುದೇ ರೀತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಲಿಂಕ್ ಕ್ಲಿಕ್ ಮಾಡಿದಾಗ ಬಳಕೆದಾರರ ಫೋನ್ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸಲು ಅನುಮತಿ ಕೇಳಲಾಗುತ್ತದೆ. ಆದರೆ ಈ ಅನುಮತಿಗೆ ಒಪ್ಪಿಗೆ ಸೂಚಿಸಿ ಕ್ಲಿಕ್ ಮಾಡಲು ಯಾವುದೇ ಆಯ್ಕೆಗಳು ಅದರಲ್ಲಿಲ್ಲ. ಅದರಲ್ಲೂ ಟಿಕ್​ಟಾಕ್ ಪ್ರೋ ಲಿಂಕ್ ಅನ್ನು ಯಾವುದೇ ಪ್ಲೇಸ್ಟೋರ್ ಅಥವಾ ಗೂಗಲ್ ಸ್ಟೋರ್​ನಿಂದ ಕಳುಹಿಸಲಾಗುತ್ತಿಲ್ಲ.

ಬದಲಿಗೆ ಮೂರನೇ ವ್ಯಕ್ತಿಯಿಂದ ರವಾನಿಸಲಾಗುತ್ತಿದೆ. ಅಂದರೆ ಯಾರಾದರೂ ಒಬ್ಬರು ತಮ್ಮ ಮೊಬೈಲ್​ಗೆ ಬಂದ ಈ ಲಿಂಕ್​ಅನ್ನು ಕ್ಲಿಕ್ ಮಾಡಿದ ಕೂಡಲೇ ತಂತಾನೆ ಆ ಮೊಬೈಲ್​ನಲ್ಲಿನ ಎಲ್ಲ ನಂಬರ್​ಗಳಿಗೆ ಲಿಂಕ್ ಫಾರ್ವರ್ಡ್ ಆಗುತ್ತಿದ್ದು, ಈಗಾಗಲೇ ಸಾವಿರಾರು ಜನರಿಗೆ ಲಿಂಕ್ ರವಾನೆಯಾಗಿದೆ ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)