| ಕೀರ್ತಿನಾರಾಯಣ ಸಿ. ಬೆಂಗಳೂರು
ಹುಲಿ ಉಗುರಿನ ಪೆಂಡೆಂಟ್ ಹೊಂದಿರುವ ಹಲವರಿಗೆ ಉರುಳು ಬಿಗಿಯಾಗುತ್ತಿರುವ ಬೆನ್ನಲ್ಲೇ ವನ್ಯಜೀವಿಗಳಿಂದ ತಯಾರಿಸಿದ ನಕಲಿ ವಸ್ತುಗಳ ಮಾರಾಟ ದಂಧೆಯೂ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕಾಡುಪ್ರಾಣಿಗಳಿಂದ ತಯಾರಿಸಿದ್ದು ಎನ್ನಲಾದ ವಸ್ತುಗಳನ್ನು 50 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೂ ಸೇಲ್ ಮಾಡುವ ಜಾಲಗಳು ಅಸ್ತಿತ್ವದಲ್ಲಿವೆ. ಆದರೆ, ಹೀಗೆ ಮಾರಾಟ ಮಾಡುವ ಪ್ರಕರಣಗಳಲ್ಲಿ ಶೇ.80ರಷ್ಟು ನಕಲಿ ದಂಧೆಯಾಗಿದೆ! ಈ ಮಧ್ಯೆ ವನ್ಯಮೃಗಗಳ ವಸ್ತುಗಳನ್ನು ಇಟ್ಟುಕೊಂಡಿರುವ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಶ್ರೀಮಂತರ ಮನೆಗಳ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಬಳಿ ಸಿಕ್ಕಿರುವ ಹುಲಿ ಉಗುರಿನ ಪೆಂಡೆಂಟ್ ಅಸಲಿಯಾಗಿದ್ದು, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿ ಕೆಲವರ ಬಳಿ ಪತ್ತೆ ಆಗಿರುವ ಪೆಂಡೆಂಟ್ಗಳು ನಕಲಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅರಣ್ಯಾಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ.
ಆದಾಗ್ಯೂ ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದನದ ಕೊಂಬು, ಗ್ರಾನೈಟ್, ಪಿಒಪಿ, ಫೈಬರ್, ನಾಯಿಯ ನರಗಳು ಸೇರಿ ಇನ್ನಿತರ ವಸ್ತುಗಳಿಂದ ಮಾಡಿರುವುದನ್ನೇ ಹುಲಿ ಉಗುರು, ಆನೆ ದಂತ ಅಥವಾ ವನ್ಯಜೀವಿಗಳಿಂದ ತಯಾರಿಸಿದ ವಸ್ತುಗಳು ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಇಂತಹ ವಸ್ತುಗಳನ್ನು ಧರಿಸಿದರೆ ಅದೃಷ್ಟ ಒಲಿಯುತ್ತದೆ. ಧೈರ್ಯ ಬರುತ್ತದೆ ಎಂದು ನಂಬಿಕೊಂಡಿರುವ ‘ಸಿರಿವಂತ’ರನ್ನೇ ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದ್ದು, ಕರ್ನಾಟಕ ಸೇರಿ ದೇಶಾದ್ಯಂತ ಇದೊಂದು ಬೃಹತ್ ದಂಧೆಯಾಗಿ ಬೇರೂರಿಕೊಂಡಿರುವುದನ್ನು ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳೇ ಖಚಿತಪಡಿಸಿದ್ದಾರೆ.
ಹಸು ಕೊಂಬಿಗೆ ನಾಯಿಯ ನರ...!: ಹಸುವಿನ ಕೊಂಬಿನಿಂದ ತಯಾರಿಸಿದ ಪೆಂಡೆಂಟನ್ನೇ ಹುಲಿ ಉಗುರಿನದ್ದು ಎಂದು ಮಾರಲಾಗುತ್ತದೆ. ಬೇಟೆಯಾಡಿದ ಹುಲಿಯಿಂದ ಕಿತ್ತ ಉಗುರು ಎಂಬುದನ್ನು ನಂಬಿಸಲು ಹಸುವಿನ ಕೊಂಬಿನಿಂದ ಮಾಡಿದ ಉಗುರಿನ ತುದಿಗೆ ನಾಯಿಯ ನರ ಕಿತ್ತು ಅಂಟಿಸಲಾಗುತ್ತದೆ. ರಕ್ತ-ಮಾಂಸ ಅಂಟಿಕೊಂಡಂತೆ ತೋರುವುದನ್ನು ಹುಲಿಯದ್ದೇ ಎಂದು ನಂಬಿಸಲಾಗುತ್ತದೆ.
ಫೈಬರ್ಗೆ ಪಿಒಪಿ ತುಂಬಿ ಆನೆ ದಂತ ಅಂತಾರೆ!: ತಮಿಳುನಾಡಿನ ಅರಣ್ಯ ಭಾಗದಲ್ಲಿ ಈಗಲೂ ದಂತಕ್ಕಾಗಿ ಆನೆಗಳನ್ನು ಬೇಟೆಯಾಡುತ್ತಾರೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಇದು ನಕಲಿ ಆಗಿರುತ್ತದೆ. ಫೈಬರ್ ವಸ್ತುಗಳನ್ನು ಬಳಸಿ ಆನೆ ದಂತದ ಮಾದರಿ ರೆಡಿ ಮಾಡಿ, ಅದರೊಳಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ತಂಬಲಾಗುತ್ತದೆ. ಕೊನೆಗೆ ಅಸಲಿ ಆನೆದಂತ ಎಂದು ನಂಬಿಸುತ್ತಾರೆ ಎಂದು ಅರಣ್ಯ ವಿಭಾಗ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಹುಲಿ ಚರ್ಮ, ಜಿಂಕೆ ಚರ್ಮ, ಜಿಂಕೆ ಕೊಂಬು, ಹೀಗೆ ವನ್ಯಜೀವಿಗಳಿಂದ ತಯಾರಿಸಿದ್ದು ಎಂದು ನಕಲಿ ವಸ್ತುಗಳನ್ನು ಮಾರಾಟ ಮಾಡಿ ವಂಚಿಸಲಾಗುತ್ತದೆ.
ಪೊಲೀಸರು ಹೇಳುವ ಪ್ರಕಾರ ಕೊಂಡುಕೊಳ್ಳುವವರನ್ನು ನಂಬಿಸಲು ಅಸಲಿ ಹುಲಿ ಉಗುರು ಅಥವಾ ಆನೆದಂತವೊಂದನ್ನು ಇಟ್ಟುಕೊಂಡಿರುತ್ತಾರೆ. ಡೀಲ್ ಕುದುರಿದ ಬಳಿಕ ಮುಂಗಡ ಹಣ ಪಡೆದು ವಸ್ತು ರೆಡಿಯಾದ ದಿನ ಬರುವಂತೆ ತಿಳಿಸುತ್ತಾರೆ. ನಂತರ ಪೆಂಡೆಂಟ್ ಸಿದ್ಧವಾಗಿದೆ ಎಂದು ಕರೆಸಿಕೊಳ್ಳುತ್ತಾರೆ. ಅಲ್ಲಿಗೆ ಹೋದ ಬಳಿಕ ಮೊದಲೇ ಯೋಜನೆ ರೂಪಿಸುವಂತೆ ಪೊಲೀಸರು ದಾಳಿ ಮಾಡುವಂತೆಯೋ ಅಥವಾ ಯಾವುದೋ ಸಂಘಟನೆ ಮುಖಂಡರು ದಾಳಿ ಮಾಡುತ್ತಿರುವಂತೆಯೋ ಗಾಬರಿ ಹುಟ್ಟಿಸಿ, ನಕಲಿ ವಸ್ತು ಕೈಗಿಟ್ಟು ಹಣ ಪಡೆದು ಪರಾರಿಯಾಗುತ್ತಾರೆ. ವಸ್ತು ಪಡೆದವರಿಗೆ ಅದು ನಕಲಿಯೋ ಅಸಲಿಯೋ ಎಂಬುದೇ ಗೊತ್ತಾಗುವುದಿಲ್ಲ.
ಚರ್ಮ, ಮೂಳೆಗಳಿಗಾಗಿ ಬೇಟೆ!: ಭಾರತದಲ್ಲಿ ಹುಲಿ, ಘೇಂಡಾಮೃಗ, ಆನೆ, ನಕ್ಷತ್ರ ಆಮೆಗಳನ್ನು ಬೇಟೆಯಾಡಿ ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣಗಳೂ ವರದಿಯಾಗಿವೆ. ಉತ್ತರ ಭಾರತದಲ್ಲಿ ಇಂತಹ ಪ್ರಕರಣಗಳು ಜಾಸ್ತಿ. ಅಲ್ಲಿಂದ ಹೊರದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ. ದಂತ, ಚರ್ಮ ಹಾಗೂ ಮೂಳೆ, ಅಂಗಾಂಗಗಳಿಗಾಗಿ ಬೇಟೆಯಾಡಲಾಗುತ್ತದೆ.
ಐದೂವರೆ ವರ್ಷದಲ್ಲಿ 127 ಹುಲಿಗಳ ಬೇಟೆ!: ಕೇಂದ್ರ ಪರಿಸರ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ 2018ರಿಂದ 2023ರ ಜು.22ರವರೆಗೆ 126 ಹುಲಿಗಳನ್ನು ಬೇಟೆಯಾಡಿರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಸ್ವಾಭಾವಿಕ ಹಾಗೂ ಬೇರೆ ಕಾರಣಗಳಿಂದ 516 ವ್ಯಾಘ್ರಗಳು ಮೃತಪಟ್ಟಿವೆ. ಉಳಿದಂತೆ 19 ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ್ದರೂ ಅದು ಬೇಟೆಯಲ್ಲ ಎಂದು ತಿಳಿಸಿದೆ.
ದಂಧೆ ಎಲ್ಲೆಲ್ಲಿ?: ಬೆಂಗಳೂರಿನಲ್ಲಿ ರಸ್ತೆಬದಿ ಗುಡಿಸಲು ಹಾಕಿಕೊಂಡಿರುವರು, ಬಂಗಾರಪೇಟೆ, ಆನೇಕಲ್, ಮೈಸೂರು ಜಿಲ್ಲೆಯ ಅಕ್ಕಿರಾಮನಪುರ, ಚಾಮರಾಜನಗರ, ಹೊಸೂರು ಗಡಿ ಭಾಗದಲ್ಲಿ ವನ್ಯಜೀವಿಗಳ ಚರ್ಮ ಹಾಗೂ ಅದರಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಜಾಲಗಳಿವೆ. ಪೊಲೀಸರು ಹಲವು ಬಾರಿ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಉಳಿದಂತೆ ತಮಿಳುನಾಡಿನ ಕಾಡಿನಲ್ಲಿ ಬೇಟೆಯಾಡಿ ಬೆಂಗಳೂರಿಗೆ ತಂದು ಮಾರುವಾಗ ಹಲವರು ಸಿಕ್ಕಿಬಿದ್ದಿದ್ದಾರೆ.
ಪಾರ್ಟಿ ನೋಡಿ ರೇಟ್ ಫಿಕ್ಸ್!: ವನ್ಯಜೀವಿಗಳ ಹೆಸರೇಳಿಕೊಂಡು ನಕಲಿ ವಸ್ತುಗಳ ಮಾರಾಟ ಮಾಡುವವರು ಅದನ್ನು ಖರೀದಿಸಲು ಬರುವವರ ಸ್ಥಾನಮಾನ ನೋಡಿಕೊಂಡು ದರ ನಿಗದಿಪಡಿಸುತ್ತಾರೆ. ಹುಲಿ ಉಗುರು ಧರಿಸಿದರೆ, ನಕ್ಷತ್ರ ಆಮೆ ಇಟ್ಟುಕೊಂಡರೆ, ಆನೆ ಬಾಲದ ಕೂದಲಿನ ಉಂಗುರು ಧರಿಸಿದರೆ ಕಷ್ಟಗಳು ದೂರಾಗುತ್ತವೆ, ಮಾನಸಿಕ ನೆಮ್ಮದಿ ಸಿಗುತ್ತದೆ, ಶ್ರೀಮಂತರಾಗುತ್ತೇವೆ ಎಂದು ನಂಬಿಕೆ ಇಟ್ಟುಕೊಂಡವರು ಹೆಚ್ಚು ಬರುತ್ತಾರೆ. ಸಾಮಾನ್ಯ ಜನರಿಂದ ಹಿಡಿದು ಸಿನಿಮಾ ಸ್ಟಾರ್ಗಳು, ರಾಜಕಾರಣಿಗಳು, ಉದ್ಯಮಿಗಳು ಇಂತಹ ವಸ್ತುಗಳನ್ನು ಖರೀದಿಸುತ್ತಾರೆ. ಬರುವವರ ಸ್ಟೇಟಸ್ ನೋಡಿಕೊಂಡು ದರ ನಿಗದಿಪಡಿಸಿ ವಸೂಲಿ ಮಾಡುತ್ತಾರೆ.
ವನ್ಯಜೀವಿ ಉತ್ಪನ್ನಗಳನ್ನು ಧರಿಸಿದ ದೂರುಗಳು ಹೆಚ್ಚಾಗುತ್ತಿರುವಂತೆ ಅರಣ್ಯಾಧಿಕಾರಿಗಳು ರಾಜ್ಯಾದ್ಯಂತ ಹಲವೆಡೆ ದಾಳಿಗಳನ್ನು ಮುಂದುವರಿಸಿದ್ದಾರೆ.