ನ್ಯೂಸ್

ರಷ್ಯಾ ಮತ್ತು ಚೀನಾದೊಂದಿಗಿನ ಬಾಂಧವ್ಯ ಭಾರತಕ್ಕೆ ಒಳ್ಳೆಯದಲ್ಲ: ಪೀಟರ್ ನವರೋ!Peter Navarro

Peter Navarro: ಭಾರತವು ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳಲ್ಲಿ ಮುಂದುವರೆಯಬೇಕು ಇಲ್ಲದೆ ಹೋದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೋ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ರಿಯಲ್ ಅಮೆರಿಕ ವಾಯ್ಸ್‌ನಲ್ಲಿ ಮಾತನಾಡಿದ ನವರೋ, ಭಾರತವು ಸುಂಕಗಳ ಮಹಾರಾಜ ಎಂದು ಹೇಳಿದ್ದಾರೆ. ಅಲ್ಲದೆ, ರಷ್ಯಾದೊಂದಿಗೆ ಭಾರತದ ಬೆಳೆಯುತ್ತಿರುವ ಇಂಧನ ಸಂಬಂಧಗಳು ಭಾರತಕ್ಕೆ ಒಳ್ಳೆಯ ರೀತಿಯಲ್ಲಿ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ನವರೋ, ಅಮೆರಿಕ ವಿರುದ್ಧ ವಿಶ್ವದ ಯಾವುದೇ ಪ್ರಮುಖ ದೇಶದಲ್ಲಿ ಅತಿ ಹೆಚ್ಚು ಸುಂಕಗಳನ್ನು ಹೊಂದಿದ್ದಾರೆ. ನಾವು ಅದನ್ನು ನಿಭಾಯಿಸಬೇಕಾಯಿತು ಎಂದು ನವರೊ ಹೇಳಿದರು. ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಭಾರತವು ರಷ್ಯಾದ ತೈಲದ ಸಣ್ಣ ಪ್ರಮಾಣದಲ್ಲಿ ಮಾತ್ರ ಖರೀದಿಸಿತ್ತು. ಆದರೆ ಈಗ ರಷ್ಯಾದ ಕಚ್ಚಾ ತೈಲವನ್ನು ಕಡಿಮೆ ಬೆಲೆಗೆ ತಂದು ಲಾಭ ಗಳಿಸುತ್ತಿದೆ ಎಂದು ತಿಳಿಸಿದರು. ಇದರಿಂದ ಅಮೆರಿಕದಲ್ಲಿ ತೆರಿಗೆ ಕಟ್ಟುವವರ ಹಣವನ್ನು ರಷ್ಯಾ ಮತ್ತು ಯುಕ್ರೇನ್ ಸಂಘರ್ಷಕ್ಕಾಗಿ ಕಳುಹಿಸಬೇಕಾಗುತ್ತದೆ ಎಂದು ನವರೋ ತಿಳಿಸಿದ್ದಾರೆ.

ಭಾರತವು ಒಂದು ಹಂತದಲ್ಲಿ ಸರಿಹೋಗಬೇಕು ಎಂದು ನಾನು ಭಾವಿಸುತ್ತೇನೆ. ಭಾರತ ಹಾಗೆ ಮಾಡದಿದ್ದರೆ, ಅದು ರಷ್ಯಾ ಮತ್ತು ಚೀನಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಇದು ಭಾರತಕ್ಕೆ ಒಳ್ಳೆಯದಲ್ಲ ಎಂದು ನವರೋ ಎಚ್ಚರಿಸಿದರು.

ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಶಾಂತಿಯ ಹಾದಿಯು ಭಾಗಶಃ ಭಾರತದ ಮೂಲಕ ಸಾಗುತ್ತದೆ. ಅಲ್ಲದೆ, ಯುರೋಪ್ ಕೂಡ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಬೇಕು ಎಂದು ನವರೋ ಎಚ್ಚರಿಕೆ ನೀಡಿದ್ದಾರೆ.

ಬ್ರಿಕ್ಸ್ ಬಣದ ವಿರುದ್ಧ ವಾಗ್ದಾಳಿ ನಡೆಸಿದ ನವರೋ, 2025 ರಲ್ಲಿ ಇಂಡೋನೇಷ್ಯಾ ಪ್ರವೇಶದ ನಂತರ ಈಗ 10 ಸದಸ್ಯರನ್ನು ಒಳಗೊಂಡಿದೆ. ಬ್ರಿಕ್ಸ್​ನ ಆರ್ಥಿಕ ವಿಧಾನಗಳು ಯುಎಸ್ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಇವರು ಯುಎಸ್‌ಗೆ ಮಾರಾಟ ಮಾಡಿದಾಗ, ಇವರ ರಫ್ತುಗಳು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ನಮ್ಮ ರಕ್ತವನ್ನು ಹೀರುವ ರಕ್ತಪಿಶಾಚಿಗಳಂತೆ ಎಂದು ನವರೊ ಆರೋಪಿಸಿದ್ದಾರೆ. ಬ್ರಿಕ್ಸ್ ಸದಸ್ಯರು ಪರಸ್ಪರ ದ್ವೇಷಿಸುತ್ತಾರೆ ಮತ್ತು ಯುಎಸ್ ವ್ಯಾಪಾರವಿಲ್ಲದೆ ಈ ಗುಂಪು ಉಳಿಯುವುದಿಲ್ಲ ಎಂದು ನವರೋ ಭವಿಷ್ಯ ನುಡಿದಿದ್ದಾರೆ. (ಏಜೆನ್ಸೀಸ್​)