ನ್ಯೂಸ್

ಸಿಡಿಲು ಬಡಿದು ದೇವಸ್ಥಾನದ ಗೋಪುರ ಭಗ್ನ!

arunakunigal

ಚಾಮರಾಜನಗರ: ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಜನತೆ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ವರುಣಾಘಾತಕ್ಕೆ ಅಪಾರ ಪ್ರಮಾಣದ ಸಾವು-ನೋವು, ಬೆಳೆಹಾನಿ ಸಂಭವಿಸಿದೆ. ಹಲವು ದೇಗುಲಗಳೂ ಜಲಪ್ರಳಯಕ್ಕೆ ಸಿಲುಕಿವೆ. ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದ್ದ ದೇವಾಲಯವೊಂದಕ್ಕೆ ಸಿಡಿಲು ಬಡಿದಿದ್ದು, ಗೋಪುರ ಭಗ್ನವಾಗಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಮಂಟೆ‌ಸ್ವಾಮಿ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

ಭಾನುವಾರ ರಾತ್ರಿ ಮಳೆ ಸುರಿದ ವೇಳೆ ಸಿಡಿಲು ಬಡಿದಿದ್ದು, ಗೋಪುರದ ಒಂದು ಭಾಗ ಬಿರುಕು ಬಿಟ್ಟಿದೆ. ಸಿಡಿಲಿನ ಶಬ್ಧ ಕೇಳಿದ್ದ ಗ್ರಾಮಸ್ಥರು ಸೋಮವಾರ ಬೆಳಗ್ಗೆ ದೇವಸ್ಥಾನದ ಬಳಿ ಬಂದು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದ ದೇಗುಲವನ್ನು ಉದ್ಘಾಟನೆಗೆ ಕಾಯುತ್ತಿತ್ತು. ಕರೊನಾ ಕಾರಣದಿಂದ ಉದ್ಘಾಟನಾ ಕಾರ್ಯವನ್ನು ಮುಂದೂಡಲಾಗಿತ್ತು. ಗೋಪುರದ ಮೇಲಿದ್ದ ಮಂಟೇಸ್ವಾಮಿ ಮೂರ್ತಿಗೆ ಸಿಡಿಲು ಬಡಿದಿದ್ದು, ಗೋಪುರದ ಇತರ ಭಾಗಗಳಿಗೂ ಹಾನಿಯಾಗಿದೆ. ಉದ್ಘಾಟನೆಗೂ ಮೊದಲೇ ದೇವಸ್ಥಾನದ ಗೋಪುರ ಭಗ್ನಗೊಂಡ ಸುದ್ದಿ ಕೇಳಿ ಸ್ಥಳೀಯರು ಮತ್ತು ಗ್ರಾಮಸ್ಥರು ಆತಂಕಗೊಂಡಿದ್ದಾರೆ.