ನ್ಯೂಸ್

ಮೂರು ಅಮೂಲ್ಯ ರತ್ನಗಳು

ಮೋಹನ್​ ಶೆಟ್ಟಿ

ಈ ಜಗತ್ತಿನಲ್ಲಿ ಮೂರು ಅಮೂಲ್ಯ ರತ್ನಗಳಿವೆ. ನೀರು ಅನ್ನ ಮತ್ತು ಒಳ್ಳೆಯ ಮಾತುಗಳು. ಯಾವ ಮನೆಯಲ್ಲಿ ಶುದ್ಧವಾದ ನೀರು, ಸಿಹಿಯಾದ ಅನ್ನ ಮತ್ತು ಜ್ಞಾನಿಗಳ ನುಡಿಯ ದೀಪವಿದೆಯೋ ಅದುವೇ ಸಿರಿವಂತನ ಮನೆ. ಈ ಮೂರು ಇಲ್ಲದ ಮನೆಯಲ್ಲಿ ಏನೆಲ್ಲ ಸಿರಿ ಸಂಪತ್ತು ಇದ್ದರೂ ಇಲ್ಲದಂತೆಯೇ. ನೀರು ಅನ್ನ ಮತ್ತು ಒಳ್ಳೆಯ ಮಾತುಗಳನ್ನು ಯಾರು ಎಲ್ಲರೊಂದಿಗೆ ಹಂಚಿಕೊಂಡು ಬದುಕುತ್ತಾರೋ ಅವರೇ ನಿಜವಾದ ಧರ್ಮವಂತರು. ಬಾಡಿಗೆ ಮನೆಯಲ್ಲಿದ್ದರೂ ಸ್ವಂತ ಮನೆಯಂತೆ ಬಳಸಬೇಕು. ಪ್ರಪಂಚದ ಚಟುವಟಿಕೆಗಳು ಆ ಪರಮಾತ್ಮನ ಕೃಪಾ ಕಾರುಣ್ಯದಿಂದ ನಡೆಯುತ್ತವೆ.

ಉರಿಯುವ ಮಣ್ಣಿನ ಹಣತೆಯಲ್ಲಿ ಎಣ್ಣೆ ತೀರಿ ಹೋಗುತ್ತದೆ. ಬತ್ತಿ ಸವೆಯುತ್ತದೆ. ಹಣತೆ ಒಡೆಯುತ್ತದೆ. ದೇಹದ ಹಣತೆಯಲ್ಲಿರುವ ಆಯುಷ್ಯದ ಎಣ್ಣೆ ತೀರಿದಾಗ ಬುದ್ಧಿಯ ಬತ್ತಿ್ತುು ಸವೆದಾಗ ಈ ದೇಹದೊಳಗಿರುವ ಆತ್ಮ ಜ್ಯೋತಿಯು ಪರಮಾತ್ಮನಲ್ಲಿ ಬೆರೆತು ಪರಂಜ್ಯೋತಿಯಾಗುತ್ತದೆ. ನಾಶವಾಗುವುದು ತನು ಮನ ಬುದ್ಧಿ ವಿನಾ ಆತ್ಮವಲ್ಲ. ಆತ್ಮ ಜ್ಯೋತಿ ಆರದ ನಂದಾದೀವಿಗೆ.ಬಯಕೆ ಇಲ್ಲದಿದ್ದರೆ ಸಾಧನೆ ಸಿದ್ಧಿ ಇಲ್ಲ. ಬಯಕೆ ಒಳ್ಳೆಯದಾದರೆ ಬದುಕೇ ಒಳ್ಳೆಯದಾಗುತ್ತದೆ. ಸ್ವಪರ ಕಲ್ಯಾಣವಾಗುತ್ತದೆ. ತನು ಮನ ಬುದ್ಧಿ ಶುದ್ಧವಾದರೆ ಕಾರ್ಯ ಸಹಜ ಸಿದ್ಧಿಸುತ್ತದೆ. ಒಳಗಿರುವ ಕೊಳೆ ಕಲ್ಮಶಗಳನ್ನು ಹೊರ ಹಾಕುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಅಂತರಂಗ ಬಹಿರಂಗ ಶುದ್ಧಿಯಿಂದ ಜೀವನ ಪಾವನಗೊಳ್ಳುತ್ತದೆ. ಈ ತನುವೆಂಬ ಮನೆಯು ಹಸನಾಗಿದ್ದರೆ ದೇವರು ಮತ್ತು ಗುರು ಒಲಿದು ನಮ್ಮನ್ನು ಉದ್ಧರಿಸುತ್ತಾನೆ. ನೆಲದಲ್ಲಿ ಬೀಜ ಬಿದ್ದು ನೀರು ಮಣ್ಣಿನಿಂದಾಗಿ ಮೊಳಕೆಯೊಡೆದು ಮರವಾಗುತ್ತದೆ. ಆ ಮರದಲ್ಲಿ ಮೂಲ ವೃಕ್ಷದ ಬಹುತೇಕ ಗುಣಗಳು ಕಾಣ ಸಿಗುತ್ತದೆ. ಅದೇ ರೀತಿ ಪೂರ್ವ ಜನ್ಮದ ಕರ್ಮದ ಫಲಗಳು ಜೀವನದಲ್ಲಿ ಪ್ರತಿಫಲನಗೊಳ್ಳುತ್ತವೆ. ದೇವರ ಇಚ್ಛೆ ಮತ್ತು ನಮ್ಮ ಕಾರ್ಯ ಒಂದೇ ಆದರೆ ಯಶಸ್ಸು ಸಾಧ್ಯ.