ನ್ಯೂಸ್

ಬುರ್ಖಾ, ಟೋಪಿ ಧರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಯುವ ಜೋಡಿಗೆ ಕೊಲೆ ಬೆದರಿಕೆ

ಬೆಂಗಳೂರು: ಬುರ್ಖಾ ಧರಿಸಿದ ಯುವತಿ ಮತ್ತು ಟೋಪಿ ಹಾಕಿದ್ದ ಯುವಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಂ ಯುವಕನೊಬ್ಬ ಇಬ್ಬರಿಗೂ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಸ್ಲಿಂ ಜೋಡಿ ಎನ್ನಲಾದ ಯುವಕ-ಯುವತಿ ಜೈಶ್ರೀರಾಮ್​ ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರ ಬೆನ್ನಲ್ಲೇ ಮುಸ್ಲಿಂ ಯುವಕನೊಬ್ಬ ಇಬ್ಬರಿಗೂ ಬೆದರಿಕೆ ಹಾಕಿದ್ದು, ಅವಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಬುರ್ಖಾ ತೆಗೆದು ಏನಾದ್ರು ಮಾತನಾಡಿ. ಮುಸ್ಲಿಂರನ್ನು ಮಧ್ಯ ಎಳೆದು ತಂದು ಜೈ ಶ್ರೀರಾಮ್​ ಎಂದು ಹೇಳಬೇಡಿ. ನೀವೇನಾದರೂ ನಿಜವಾದ ಮುಸ್ಲಿಮರ ಮುಂದೆ ಬಂದು ಈ ರೀತಿ ಮಾತನಾಡಿದರೆ ನಿಮ್ಮ ಕತ್ತು ಸೀಳ್ತಿವಿ ಎಂದು ಯುವಕ ಬೆದರಿಕೆ ಹಾಕಿದ್ದಾನೆ.

ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಹೀಗಾಗಿ ವೈರಲ್​ ಆಗಿರುವ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಪರಿಶೀಲನೆ ಮಾಡುವುದಾಗಿ ರೀಟ್ವೀಟ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)