ನ್ಯೂಸ್

ಪೊಲೀಸ್ ದಂಪತಿಗೆ ವರ್ಗ ಭಾಗ್ಯ; 7 ವರ್ಷ ಸೇವಾವಧಿ ಪೂರ್ಣಗೊಳಿಸಿರುವವರು ಪರಿಗಣನೆ

ಬೆಂಗಳೂರು: ಪತಿ-ಪತ್ನಿ ಪ್ರಕರಣದಲ್ಲಿ ಅಂತರ ಜಿಲ್ಲಾ ವರ್ಗಾವಣೆ ಪರಿಗಣಿಸುತ್ತಿಲ್ಲವೆಂದು ಆರೋಪಿಸಿ ಪೊಲೀಸರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ ಬೆನ್ನಲ್ಲೇ ಕಡ್ಡಾಯವಾಗಿ ವರ್ಗಾವಣೆ ಅರ್ಜಿ ಪರಿಗಣಿಸುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಏತನ್ಮಧ್ಯೆ ಪತಿ-ಪತ್ನಿ ಪ್ರಕರಣಗಳಿಗಷ್ಟೇ ಸೀಮಿತಗೊಳಿಸುವ ಬದಲು ಸಾಮಾನ್ಯ ಪ್ರಕರಣಗಳಲ್ಲೂ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡುವಂತೆ ಪೊಲೀಸರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಏಳೆಂಟು ವರ್ಷ ಸೇವೆ ಸಲ್ಲಿಸಿದ್ದರೂ ವರ್ಗಾವಣೆ ಮಾಡದಿರುವ ಬಗ್ಗೆ ಆ.25ರಂದು ‘ಪತಿ-ಪತ್ನಿ ಪ್ರಕರಣ ಪೊಲೀಸರಿಗೆ ಸಿಗದ ವರ್ಗಾವಣೆ’ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಹಲವು ಪೊಲೀಸರು, ಕೆಎಟಿಗೆ ಅರ್ಜಿ ಸಲ್ಲಿಸಿ, ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಡಿಜಿಪಿ ಅವರನ್ನೂ ಪ್ರತಿವಾದಿಯನ್ನಾಗಿಸಲಾಗಿತ್ತು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಕೆಎಟಿ, ಮುಂದಿನ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿತು. ಪ್ರಕರಣದ ಬಗ್ಗೆ ಕೆಎಟಿಗೆ ಉತ್ತರಿಸಬೇಕಾದ ಹಿನ್ನೆಲೆಯಲ್ಲಿ ಬುಧವಾರ (ಸೆ.10) ಗೃಹ ಸಚಿವರು ಲಿಖಿತ ಸೂಚನೆ ಹೊರಡಿಸಿದ್ದಾರೆ.