ಹೊಟ್ಟೆಯ ಗ್ಯಾಸ್ ಸಮಸ್ಯೆ, ಮಲಬದ್ಧತೆ ಮತ್ತು ಮಧುಮೇಹ ಉಪಶಮನ ಮಾಡುವಲ್ಲಿ ಬಲು ಸಹಕಾರಿಯಾದಂತಹ ಆಸನವೆಂದರೆ, ಪವನಮುಕ್ತಾಸನ. ಇದರ ನಿಯಮಿತ ಅಭ್ಯಾಸವು, ಜೀರ್ಣಕ್ರಿಯೆಯನ್ನು ಸುಧಾರಿಸಿ, ಶರೀರದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಪ್ರಯೋಜನಗಳು : ಹೊಟ್ಟೆಯ ಗ್ಯಾಸ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳ ನಿವಾರಣೆಯಾಗುತ್ತದೆ. ಮಲಬದ್ಧತೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಈ ಆಸನ ಮಾಡುವುದರಿಂದ ಕುತ್ತಿಗೆ ಮತ್ತು ಬೆನ್ನಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಕರಳು ಮತ್ತು ಹೊಟ್ಟೆಗೆ ಪರಿಣಾಮಕಾರಿಯಾಗಿ ಮಸಾಜ್ ಆಗುತ್ತದೆ. ಜೀರ್ಣಾಂಗದ ಆಂತರಿಕ ಅಂಗಗಳು ಉತ್ತೇಜಿತಗೊಳ್ಳುತ್ತವೆ. ಬೆನ್ನು, ಕಾಲು ಮತ್ತು ತೋಳುಗಳ ಸ್ನಾಯುಗಳು ಬಲಗೊಳ್ಳುತ್ತವೆ.
ಮಾಡುವ ವಿಧಾನ : ಜಮಖಾನದ ಮೇಲೆ ಅಂಗಾತ ಮಲಗಿ, ಎರಡೂ ಕೈಗಳ ಸಹಾಯದಿಂದ ಬಲಗಾಲನ್ನು ಮಡಿಸಿಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಗಲ್ಲವನ್ನು ಮಂಡಿಗೆ ಸ್ಪರ್ಶಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲನ್ನು ಬಿಟ್ಟು ವಿಶ್ರಮಿಸಬೇಕು. ಇದೇ ರೀತಿ ಎರಡೂ ಕೈಗಳನ್ನು ಬಳಸಿ ಎಡಗಾಲನ್ನು ಮಡಿಸಿಕೊಂಡು, ಉಸಿರನ್ನು ತೆಗೆದುಕೊಳ್ಳುತ್ತಾ ಗಲ್ಲವನ್ನು ಮಂಡಿಗೆ ತಾಗಿಸುವುದು. ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸುತ್ತಾ ಈ ಸ್ಥಿತಿಯಲ್ಲಿದ್ದು, ನಂತರ ಉಸಿರನ್ನು ಬಿಡುತ್ತಾ ವಿಶ್ರಮಿಸುವುದು.
ಸಂಪೂರ್ಣ ಪವನಮುಕ್ತಾಸನ - ಎರಡೂ ಕಾಲುಗಳನ್ನು ಒಟ್ಟಿಗೇ ಮಡಿಚಿ, ಉಸಿರನ್ನು ತೆಗೆದುಕೊಳ್ಳುತ್ತಾ, ಎರಡೂ ಕೈಗಳಿಂದ ಹಿಡಿದುಕೊಳ್ಳಬೇಕು. ಮಂಡಿಗಳಿಗೆ ಗಲ್ಲವನ್ನು ಸ್ಪರ್ಶಿಸಿ ಸ್ವಲ್ಪಹೊತ್ತು ಹಾಗೇ ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರು ಬಿಡುತ್ತಾ ವಿಶ್ರಮಿಸಬೇಕು.
ಅಧಿಕ ರಕ್ತದೊತ್ತಡ ಇರುವವರು ಪವನಮುಕ್ತಾಸನ ಮಾಡುವುದು ಬೇಡ.