ಬರ್ನ್: ದಯಾಮರಣ ಬಯಸುವವರು ಹೆಚ್ಚಿನ ಯಾತನೆ ಇಲ್ಲದೆ ಒಂದೇ ನಿಮಿಷದಲ್ಲಿ ಕೊನೆಯುಸಿರೆಳೆಯುವ ಶವಪೆಟ್ಟಿಗೆ ರೂಪದ ಕ್ಯಾಪ್ಸೂಲ್ ಅನ್ನು ಸ್ವಿಜರ್ಲೆಂಡ್ ಸರ್ಕಾರ ಕಾನೂನುಬದ್ಧ ಗೊಳಿಸಿದೆ. ದಯಾಮರಣ ವಿರೋಧಿ ಗಳು ಈ ಯಂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಸೂಲ್ನಲ್ಲಿ ಆಮ್ಲಜನಕ ಮಟ್ಟ ತೀರಾ ಕಡಿಮೆಯಾಗಿ ಹೈಪೋಕ್ಸಿಯಾ (ಜೀವಕೋಶಕ್ಕೆ ಆಮ್ಲಜನಕ ಲಭ್ಯತೆ ಕುಸಿಯುವುದು) ಮೂಲಕ ಸಾವು ಬರುತ್ತದೆ. ದಯಾ ಮರಣ ಬಯಸಿದವರು ಇಚ್ಛಿಸಿದ ಜಾಗಕ್ಕೆ ಕ್ಯಾಪ್ಸೂಲ್ ಒಯ್ಯಲಾಗುತ್ತದೆ ಎಂದು ಈ ಕ್ಯಾಪ್ಸೂಲ್ ತಯಾರಿಸಿರುವ ಕಂಪನಿ ಹೇಳಿದೆ. ಜೈವಿಕವಿಘಟನೆಯ (ಬಯೋಡಿಗ್ರೆಡೇಬಲ್) ಕ್ಯಾಪ್ಸೂಲ್ ಅನ್ನು ಶವಪೆಟ್ಟಿಗೆಯಾಗಿ ಕಾರ್ಯ ನಿರ್ವಹಿಸುವಂತಾಗಲು ಅದನ್ನು ಬೇಸ್ನಿಂದ ಬೇರ್ಪಡಿಸಲಾಗುತ್ತದೆ. ‘ಸಾರ್ಕೆ’ ಎಂದು ಹೆಸರಿಸಲಾಗಿರುವ ಈ ಯಂತ್ರ ಮುಂದಿನ ವರ್ಷ ಬಳಕೆಗೆ ಲಭ್ಯವಾಗುವ ಸಂಭವವಿದೆ.
‘ಡಾಕ್ಟರ್ ಡೆತ್’: ಆತ್ಮಹತ್ಯೆ ಕೋಶ (ಸೂಸೈಡ್ ಪಾಡ್) ‘ಡಾಕ್ಟರ್ ಡೆತ್’ ಎಂದೇ ಕುಖ್ಯಾತನಾಗಿರುವ ಫಿಲಿಪ್ ನಿಶ್ಚೆಕ್ ಈ ಚಿಂತನೆಯ ಕೂಸು ಈ ಕ್ಯಾಪ್ಸೂಲ್ ಎಂದು ಹೇಳಲಾಗಿದೆ. ನ್ಯೂಜಿಲೆಂಡ್ನಲ್ಲಿ ಅಸಿಸ್ಟೆಡ್ ಸೂಸೈಡ್ ಕಾನೂನುಬದ್ಧ ವಾಗಿದ್ದು ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸಂಸ್ಥೆಗಳ ಸೇವೆಯನ್ನು ಬಳಸಿಕೊಂಡಿದ್ದಾರೆ.