ನ್ಯೂಸ್

'ಕಣ್ಮರೆಯಾದ ಲೀಲಮ್ಮ'; ಬಣ್ಣದ ಲೋಕದಲ್ಲಿ ಲೀಲಾವತಿಯವರ ಮೊದಲ ಚಿತ್ರ, ಪಾತ್ರ ಯಾವುದು? ಇಲ್ಲಿದೆ ವಿವರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಬಹುಭಾಷಾ ತಾರೆ ಲೀಲಾವತಿ (85) ಶುಕ್ರವಾರ (ಡಿ.08) ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದು, ಅವರನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಚಿತ್ರರಂಗ ಶೋಕದ ಕಗ್ಗತ್ತಲಿನಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ಕಲಾವಿದೆಯ ಅಗಲಿಕೆಯಿಂದ ಕಂಗಲಾದ ಅಭಿಮಾನಿಗಳು, ಅಪಾರ ಸಂಖ್ಯೆಯಲ್ಲಿ ಇಂದು ಅವರ ಪಾರ್ಥಿವ ಶರೀರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ದಶಕಗಳ ಕಾಲ ಚಿತ್ರರಸಿಕರನ್ನು ರಂಜಿಸಿದ ಲೀಲಮ್ಮ ನಟಿಸಿದ ಮೊದಲ ಸಿನಿಮಾ? ಪಾತ್ರ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಐದು ದಶಕಗಳ ಕಾಲ ಚಿತ್ರಪ್ರೇಮಿಗಳನ್ನು ಮನರಂಜಿಸಿದ ಕಲಾ ಶಾರದೆ ಲೀಲಾವತಿ ಅವರು, 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿ, ಸೈ ಎನ್ನಿಸಿಕೊಂಡವರು. ಹಲವಾರು ಪಾತ್ರಗಳಲ್ಲಿ ಜೀವಿಸಿ ಆಗಾಧ ಸಂಖ್ಯೆಯ ಹೃದಯಗಳಲ್ಲಿ ಇಂದು ಶಾಶ್ವತವಾಗಿ ನೆಲೆಸಿರುವ ನಟಿ ಲೀಲಾವತಿ ಇನ್ನೂ ಕೇವಲ ನೆನಪು ಮಾತ್ರ ಎಂಬುದು ಸದ್ಯ ಅರಗಿಸಿಕೊಳ್ಳಲಾಗದ ಸಂಗತಿ!

ಕನ್ನಡ ಚಿತ್ರರಂಗವನ್ನು ಆಳಿದ ನಟಿ ಲೀಲಾವತಿ ಅವರು ಅತೀ ಹೆಚ್ಚು ಸಿನಿಮಾಗಳನ್ನು ಅಭಿನಯಿಸಿದ್ದು ವರನಟ ಡಾ. ರಾಜ್​ಕುಮಾರ್​ ಅವರೊಂದಿಗೆ. ಸುಮಾರು 50 ಚಿತ್ರಗಳಲ್ಲಿ ರಾಜ್​ಗೆ ಜೋಡಿಯಾಗಿ ಲೀಲಮ್ಮ ನಟಿಸಿ, ಮಿಂಚಿದ್ದರು.

660 ಸಿನಿಮಾಗಳ ಪೈಕಿ 300ಕ್ಕೂ ಅಧಿಕ ಕನ್ನಡ ಚಿತ್ರಗಳೇ ಆಗಿವೆ. 'ಮಾಂಗಲ್ಯ ಯೋಗ' ಲೀಲಾವತಿ ನಟಿಸಿದ ಮೊದಲ ಕನ್ನಡ ಚಿತ್ರವಾಗಿದ್ದು, ಅವರಿಗೆ ಸಿಕ್ಕ ಮೊದಲ ಪಾತ್ರ ಸಖಿ. ಡಿ. ಶಂಕರ್ ಸಿಂಗ್​ ಅವರ ಯಶಸ್ವೀ ಚಿತ್ರಗಳಲ್ಲಿ ಒಂದಾದ 'ನಾಗಕನ್ನಿಕಾ' (1949) ಸಿನಿಮಾದಲ್ಲಿ ನಾಯಕಿ ನಾಗಕನ್ಯೆಗೆ ಗಾಳಿ ಬೀಸುವ ಸಖಿಯ ಪಾತ್ರದಲ್ಲಿ ಲೀಲಮ್ಮ ಅಭಿನಯಿಸಿದರು.