ಕುಕನೂರು: ಪ್ರಸಕ್ತ ಮುಂಗಾರಿನಲ್ಲಿ ಬರ ಎದುರಿಸಿದ ರೈತರಿಗೆ ಹಿಂಗಾರಿನ ಕಡಲೆ ಬೆಳೆಗೆ ಕೀಟ ಬಾಧೆ ಆವರಿಸಿ, ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.
ಇದನ್ನೂ ಓದಿ: ಸಿರಿಧಾನ್ಯ ಬರಗಾಲದ ಬೆಳೆ
ತಾಲೂಕಿನಲ್ಲಿ ಯರಿ ಭಾಗಗಳಾದ ಬನ್ನಿಕೊಪ್ಪ, ಯರೇಹಂಚಿನಾಳ, ಬಿನ್ನಾಳ, ತಳಕಲ್ ಸೇರಿ ವಿವಿಧ ಕಡೆ ಹಿಂಗಾರು ಹಂಗಾಮಿನಲ್ಲಿ ಕಡಲೆ ಹಾಗೂ ಬಿಳಿಜೋಳ ಬಿತ್ತನೆ ಮಾಡಿದ್ದು, ವಿವಿಧ ರೋಗಬಾಧೆಯಿಂದ ಬೆಳೆದ ಬೆಳೆಗಳು ಕೈಗೆ ಬಾರದ ಸ್ಥಿತಿ ತಲುಪುತ್ತಿವೆ.
ತಾಲೂಕಿನಲ್ಲಿ ಸುಮಾರು 30,000 ಹೆಕ್ಟೇರ್ ಕಡಲೆ ಹಾಗೂ 4 ಸಾವಿರ ಹೆಕ್ಟೇರ್ ಬಿಳಿಜೋಳ ಬಿತ್ತನೆಯಾಗಿದೆ. ಮೊದಲ ಹಂತದಲ್ಲಿ ಬಿತ್ತನೆಯಾದ ಕಡಲೆ ಬೆಳೆ ಹಾಗೂ ಕಳೆದ 20 ದಿನಗಳ ಹಿಂದೆ ಬಿತ್ತನೆಯಾದ ಕಡಲೆಗೆ ರೋಗ ಬಾಧೆ ಕಾಡುತ್ತಿದೆ. ಹಿಂಗಾರು ಬೆಳೆ ಹವಮಾನದಿಂದಲೇ ಬರುತ್ತದೆ ಎನ್ನುವ ಮಾತು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಹುಸಿಯಾಗುವಂತೆಯಾಗಿದೆ.
ಪ್ರತಿ ಎಕರೆಗೆ ಕಡಲೆ ಬಿತ್ತನೆ ಮಾಡಲು 10 ಸಾವಿರ ರೂ. ವೆಚ್ಚ ಭರಿಸಿದ್ದಾರೆ. ಹಸಿರು ಕೀಟದ ಬಾಧೆ ಹೆಚ್ಚಾದ ಕಾರಣ ಪ್ರತಿ ಎಕರೆಗೆ ಒಂದು ಬಾರಿ ಕೀಟನಾಶಕ ಬಳಕೆ ಮಾಡಿದರೇ ಮೂರರಿಂದ ನಾಲ್ಕು ಸಾವಿರ ರೂ. ವೆಚ್ಚವಾಗುತ್ತದೆ.
ಅದರೂ, ರೋಗ ಹತ್ತೋಟಿಗೆ ಬಾರುತ್ತಿಲ್ಲ. 10 ರಿಂದ 15 ದಿನದ ಬೆಳೆ ಇರುವಾಗಲೇ ಕೀಟನಾಶ ಸಿಂಪಡಿಸುವ ಪರಿಸ್ಥಿತಿ ಎದುರಾಗಿದೆ. ಸದ್ಯ ಕೃಷಿ ವಿಸ್ತರಣಾ ಕೇಂದ್ರದ ತಂಡ ಕಡಲೆ ಬೆಳೆ ಬೆಳೆದ ರೈತರ ಜಮೀನಿಗೆ ತೆರಳಿ ಸಲಹೆ ನೀಡುತ್ತಿದ್ದು, ಕೃಷಿ ಇಲಾಖೆ ಮಾತ್ರ ಇತ್ತ ಗಮನ ಹರಿಸಿಲ್ಲ.
ರೈತರು ಕೂಡ ಕೃಷಿ ಜಂಟಿ ನಿದೇರ್ಶಕರಿಗೆ ಕಡಲೆ ಬೆಳೆಗೆ ಕೀಟಬಾಧೆ ಕುರಿತು ಸಲಹೆ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಒಬ್ಬ ರೈತ ಜಮೀನಿಗೆ ತೆರಳಿ ಸಲಹೆ ನೀಡಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಎಲ್ಲ ಕಂಪನಿಯ ಕೀಟನಾಶಕ ಬಳಕೆ ಮಾಡಿದರು ಹುಳಗಳು ಕಡಿಮೆಯಾಗುತ್ತಿಲ್ಲ. ಕೃಷಿ ವಿಸ್ತರಣಾ ಕೇಂದ್ರ ತಂಡ ಆಗಮಿಸಿ, ಸಲಹೆ ನೀಡಿದೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ಈಗಾಗಲೇ ಮುಂಗಾರು ಸಂಪೂರ್ಣ ಬರ ಅನುಭವಿಸಿದ್ದು, ಸದ್ಯ ಹಿಂಗಾರಿನ ಕಡಲೆ ಕೂಡ ಕೈ ಕೊಡುವ ಪರಿಸ್ಥಿತಿ ಎದುರಾಗಿದೆ.
ಮುದಕಣ್ಣ ದೇವರ, ಬನ್ನಿಕೊಪ್ಪ ರೈತ