ವಿಜಯನಗರ: ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ರಾಜೀನಾಮೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಾಯಕರು ಯಾರೇ ಪಕ್ಷ ಬಿಟ್ಟು ಹೋದರೂ ಯಾವುದೇ ನಷ್ಟವಿಲ್ಲ, ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ನರೇಂದ್ರ ಮೋದಿಯವರು ಕಾಲಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ. ಹಲವಾರು ಸಮೀಕ್ಷೆ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಬದಲಾವಣೆ ಆಗಿದೆ. ಪಕ್ಷಕ್ಕೆ ಅದನ್ನು ನಿಭಾಯಿಸುವ ಶಕ್ತಿ ಇದೆ ಎನ್ನುತ್ತ ಬದಲಾವಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಕೆಲವು ಹಿರಿಯರು ತಾವೇ ನಿವೃತ್ತಿ ಘೋಷಣೆ ಮಾಡಿ ನಿವೃತ್ತಿ ಹೊಂದಿದ್ದಾರೆ. ಆನಂದಸಿಂಗ್ಗೆ ವಯಸ್ಸಿತ್ತು, ಅವರ ಜೊತೆ ಈಶ್ವರಪ್ಪ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಸ್.ಯಡಿಯೂರಪ್ಪ ಯುವಕರಿಗೆ ಅವಕಾಶ ಮಾಡಿಕೊಟ್ಟರು. ಶೆಟ್ಟರ್ ಸಹ ಯುವಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಅವರಿಗೆ ಪಕ್ಷ ದೆಹಲಿ ಮಟ್ಷದಲ್ಲಿ ದೊಡ್ಡ ಜವಾಬ್ದಾರಿ ಕೊಡುವ ಭರವಸೆ ನೀಡಿತ್ತು. ಪಕ್ಷ ಅವರಿಗೆ ದೊಡ್ಡ ಸ್ಥಾನಮಾನಗಳನ್ನ ಕೊಟ್ಟಿದೆ, ಅವರು ಶಾಸಕರಾಗಲು ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಇಂಥ ನಾಯಕರು ಯಾರೇ ಪಕ್ಷ ಬಿಟ್ಟು ಹೋದರೂ ಅವರಿಂದ ಯಾವುದೇ ನಷ್ಟವಿಲ್ಲ. ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಬೊಮ್ಮಾಯಿ ಹೇಳಿದರು.