ನ್ಯೂಸ್

ಕನ್ನಡಿಗಳಲ್ಲ ಎಂದು ಟ್ರೋಲ್​; ನನ್ನ ಕನ್ನಡ ನಿಷ್ಠೆ ಬಗ್ಗೆ ಯಾರಿಗೂ ಉತ್ತರಿಸುವ ಅಗತ್ಯವಿಲ್ಲ; ಕಿರಣ್ ಮಜುಂದಾರ್ ಶಾ ತಿರುಗೇಟು| Kiran Mazumdar-Shaw

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು, ಮೂಲ ಸೌಕರ್ಯಗಳ ಬಗ್ಗೆ ಟೀಕೆ ಮಾಡಿದ ನಂತರ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ(Kiran Mazumdar-Shaw) ಟ್ರೋಲ್​ಗೆ ಗುರಿಯಾಗಿದ್ದು, ಅವರು ಕನ್ನಡಿಗರಲ್ಲ, ಗುಜರಾತಿ. ಹಾಗಾಗಿ ಬೆಂಗಳೂರು, ಕರ್ನಾಟಕದ ಬಗ್ಗೆ ಮೂಲಸೌಕರ್ಯಗಳ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಟ್ರೋಲ್ ಪೇಜ್​ಗಳು ಅವರನ್ನು ಪ್ರಶ್ನಿಸಿದ್ದವು.

ತಾವು ಕನ್ನಡಿಗರಲ್ಲ ಎಂಬ ಟ್ರೋಲ್​ಗಳಿಗೆ ಬುಧವಾರ(ಅ. 22) ತಿರುಗೇಟು ನೀಡಿರುವ ಕಿರಣ್ ಮಜುಂದಾರ್ ಶಾ, ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ, ಇದು ನನ್ನ ನಗರ. ಕರ್ನಾಟಕದ ಬಗೆಗಿನ ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ಉತ್ತರಿಸುವ ಅಗತ್ಯವಿಲ್ಲ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ಅವರು, ನಾನು ಈ ನಗರದಲ್ಲಿ ಹುಟ್ಟಿ ಏಳು ದಶಕ ಕಳೆದಿದೆ. ಇದು ನನ್ನ ನಗರ. ಕನ್ನಡ ಸಂಸ್ಕೃತಿಯನ್ನು ಪ್ರೀತಿಸಿದ್ದೇನೆ, ಅಂತಹ ಅದ್ಭುತ ಭಾಷೆಯನ್ನು ಓದಲು ಮತ್ತು ಬರೆಯಲು ಬರುತ್ತದೆ. ಕರ್ನಾಟಕದ ಬಗೆಗಿನ ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ನಾನು ಹೆಮ್ಮೆಯ ಕನ್ನಡಿಗ ಎಂದು ಬರೆದಿದ್ದಾರೆ.

ಕನ್ನಡಿಗಳಲ್ಲ ಎಂದು ಕಿರಣ್ ಮಜುಂದಾರ್ ಶಾ ಇದೇ ಮೊದಲ ಬಾರಿಗೆ ಟ್ರೋಲ್​ಗೆ ಗುರಿಯಾಗಿಲ್ಲ. ಈ ಹಿಂದೆ ಕನ್ನಡ ರಾಜ್ಯ ಸರ್ಕಾರ ಕೆಲವು ಖಾಸಗಿ ವಲಯಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿದಾಗಲೂ ವಿರೋಧಿಸಿದ್ದರು. ಆಗಲೂ ಕನ್ನಡಿಗಳಲ್ಲ ಎಂದು ಟ್ರೋಲ್​ಗೆ ಗುರಿಯಾಗಿದ್ದರು. ಆಗಲೂ ನೀವು ಭಾವಿಸುವುದಕ್ಕಿಂತಲೂ ನಾನು ಹೆಚ್ಚು ಕನ್ನಡಿಗಳು ಎಂದು ಪ್ರತಿಕ್ರಿಯಿಸಿದ್ದರು.

ಬಯೋಕಾನ್ ಸಂಸ್ಥಾಪಕಿ, ಇಂಡಿಯಾ ಇಂಕ್‌ನ ಪ್ರಮುಖ ಧ್ವನಿಯಾಗಿರುವ ಉದ್ಯಮಿ ಕಿರಣ್ ಮಜುಂದಾರ್-ಶಾ 1953 ಮಾರ್ಚ್​ 23ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿರುವ ಅವರು 1973ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. 1978ರಲ್ಲಿ ಬಯೋಕಾನ್ ಕಂಪನಿಯನ್ನು ಸ್ಥಾಪಿಸಿದ್ದಾರೆ. (ಏಜೆನ್ಸೀಸ್)