ಬೆಂಗಳೂರು: ಹಾಗೇ ನೋಡಿದರೆ ನಲ್ವತ್ತರ ಥರ ಕಾಣಿಸುವ ಈಕೆಯ ವಯಸ್ಸು ಅರವತ್ತರ ಆಜುಬಾಜು. ಜೊತೆಗೆ ಇಬ್ಬರು ಮೊಮ್ಮಕ್ಕಳ ಅಜ್ಜಿ ಬೇರೆ. ಅಷ್ಟೇ ಅಲ್ಲ, ಈಗಲೂ ಸ್ವಿಮ್ಸೂಟ್ನಲ್ಲಿ ಫಿಟ್ ಆಗಿ ಕಾಣಿಸಿಕೊಳ್ಳುವ ಈಕೆ 2021ರ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ಸೂಟ್ ಕಾಂಪಿಟಿಷನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಗರಿಷ್ಠ ವಯಸ್ಸಿನ ಮಹಿಳೆ.
ಲಾಸ್ ಏಂಜಲೀಸ್ ಹಾಗೂ ಆಗಾಗ ಇಂಡೊನೇಷ್ಯಾದ ಬಾಲಿಯಲ್ಲೂ ವಾಸಿಸುತ್ತಿರುವ ಈಕೆಯ ಹೆಸರು ಲೆಸ್ಲೀ ಕಾರ್ಲ್ಟನ್. ಹಾಲಿವುಡ್ ನಟನೊಂದಿಗೆ ಎಂಗೇಜ್ ಆಗಿರುವ ಈಕೆಗೆ ವಯಸ್ಸು ಇನ್ನೇನು 62 ಆಗಲಿದೆ. ಈಗಲೂ ಸ್ವಿಮ್ಸೂಟ್ ಹಾಕಿಕೊಂಡು ಹೊರಟರೆ ವಯಸ್ಸು 40 ಇರಬಹುದೇನೋ ಎಂದು ಹಲವರು ತಪ್ಪು ಲೆಕ್ಕಾಚಾರ ಹಾಕುತ್ತಾರೆ ಎನ್ನುವ ಲೆಸ್ಲೀ, ಈ ವಯಸ್ಸಲ್ಲೂ ತನ್ನ ಫಿಟ್ನೆಸ್ ಹಾಗೂ ಯಂಗ್ಲುಕ್ ಹೇಗೆ ಸಾಧ್ಯ ಎಂಬುದರ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಲ್ಲದೆ, ಆ ಕುರಿತ ಟಿಪ್ಸ್ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಇಬ್ಬರು ಮಕ್ಕಳ ತಾಯಿ ಹಾಗೂ ಇಬ್ಬರು ಮೊಮ್ಮಕ್ಕಳ ಅಜ್ಜಿ ಆಗಿರುವ ಲೆಸ್ಲಿ, ಈ ವಯಸ್ಸಲ್ಲೂ 2021ರ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ಸೂಟ್ನಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಹಿರಿಯ ಮಹಿಳೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಯವ್ವನದಲ್ಲಿ ನಾನು ಕ್ರೀಡೆಯಲ್ಲಿ ಭಾಗವಹಿಸಿರಲಿಲ್ಲ ಹಾಗೂ ಇಷ್ಟಬಂದಿದ್ದು ತಿನ್ನುತ್ತಿದ್ದೆ. ಅದಾಗ್ಯೂ ಅದೃಷ್ಟವಶಾತ್ ಸ್ಲಿಮ್ ಆಗಿಯೇ ಇದ್ದೆ ಎನ್ನುತ್ತಾರೆ ಲೆಸ್ಲೀ. ಆದರೆ ನಂತರ ನನ್ನ ಅಜ್ಜಿಯ ಮಾತುಗಳನ್ನು ಪಾಲಿಸಲಾರಂಭಿಸಿದೆ. ಆಕೆ ನೃತ್ಯಗಾತಿಯಾಗಿದ್ದರು ಮತ್ತು ಕಡಿಮೆ ತಿನ್ನುತ್ತಿದ್ದರು. ಅಂದರೆ ಒಮ್ಮೆಗೇ ಹೆಚ್ಚು ತಿನ್ನುವ ಬದಲು ಪ್ರತಿ 2-3 ಗಂಟೆಗಳಿಗೊಮ್ಮೆ ಸ್ವಲ್ಪಸ್ವಲ್ಪ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದರು. ನಾನೂ ಅದನ್ನೇ ಪಾಲಿಸಿಕೊಂಡು ಬಂದೆ. ನಂತರ ನನ್ನ 30ರ ವಯಸ್ಸಿನಲ್ಲಿ ಕ್ರೀಡೆಯನ್ನು ಪ್ರೀತಿಸಲಾರಂಭಿಸಿದೆ. ಕರಾಟೆಯಲ್ಲಿ ಬ್ಲ್ಯಾಕ್ಬೆಲ್ಟ್ ಪಡೆದೆ, ಸ್ಕಿಯಿಂಗ್ ಮಾಡುತ್ತಿದ್ದೆ. ಇನ್ನು ಕಳೆದ 10 ವರ್ಷಗಳಿಂದ ತೂಕ ಎತ್ತಲು ಆರಂಭಿಸಿದೆ. ಅದು ನನ್ನ ಫಿಗರ್ ಮೇಂಟೇನ್ ಮಾಡಲು ನೆರವಾಯಿತು. ನಾನು ನನ್ನ 20ರ ವಯಸ್ಸಿನ ಫೋಟೋ ನೋಡಿದರೂ ಈಗಲೂ ಹಾಗೇ ಇದ್ದೇನೆ. ನನ್ನ ತ್ವಚೆ ಬದಲಾಗಿರಬಹುದು, ದೇಹ ಹಾಗೇ ಇದೆ ಎನ್ನುವ ಲೆಸ್ಲೀ, ನಾವು ಏನು ತಿನ್ನುತ್ತೇವೋ, ಹೇಗೆ ಯೋಚಿಸುತ್ತೇವೋ ಹಾಗೇ ಆಗುತ್ತೇವೆ ಎನ್ನುತ್ತಾರೆ.
ನನಗೆ ಹದಿನಾರನೇ ವಯಸ್ಸಿನಲ್ಲೇ ಮದುವೆಯಾಯ್ತು. 17ನೇ ವಯಸ್ಸಿನಲ್ಲಿ ಮೊದಲ ಮಗು, 19ನೇ ವಯಸ್ಸಿನಲ್ಲಿ ಎರಡನೇ ಮಗು ಜನಿಸಿತು. ನನ್ನ ಮಕ್ಕಳು ಹದಿಹರೆಯಕ್ಕೆ ಬಂದಾಗ ನಾನು ಅವರ ತಾಯಿಯ ಬದಲು ಸೋದರಿಯ ಥರ ಕಾಣಿಸುತ್ತಿದ್ದೆ. ಹಾಗಂತ ಅವರ ಶಾಲೆಗಳಲ್ಲಿ ತಮಾಷೆ ಮಾಡುತ್ತಿದ್ದರು ಎನ್ನುತ್ತಾರೆ ಲೆಸ್ಲೀ.
2021ರ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ಸೂಟ್ನಲ್ಲಿ ಸ್ಪರ್ಧೆಯಲ್ಲಿ ಗೆದ್ದರೆ ಕವರ್ ಪೇಜ್ನಲ್ಲಿ ಲೆಸ್ಲೀ ರಾರಾಜಿಸಲಿದ್ದಾರೆ. ಐವತ್ತರ ಬಳಿಕವೂ ನಾನು ಬಿಕಿನಿಯಲ್ಲಿ ಕಂಗೊಳಿಸಲಿದ್ದೇನೆ ಅಂತ ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ ಎನ್ನುವ ಲೆಸ್ಲೀ, ಯಾವ ವಯಸ್ಸಿನಲ್ಲಿ ಬೇಕಿದ್ದರೂ ಸುಂದರವಾಗಿ ಕಾಣಿಸಿಕೊಳ್ಳಬಹುದು ಎಂದು ಇತರ ಮಹಿಳೆಯರನ್ನು ಹುರಿದುಂಬಿಸುವ ಸಲುವಾಗಿಯೇ ಇದನ್ನೆಲ್ಲ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸೌಂದರ್ಯಕ್ಕೆ ಎಕ್ಸ್ಪೈರಿ ಡೇಟ್ ಇಲ್ಲ ಎನ್ನುವ ಲೆಸ್ಲೀ, ಆರೋಗ್ಯಕರ ಜೀವನಶೈಲಿ ಹಾಗೂ ಒಳ್ಳೆಯ ಮನೋಭಾವದಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಕಿವಿಮಾತು ಹೇಳುತ್ತಾರೆ. (ಏಜೆನ್ಸೀಸ್)