ತಿರುವನಂತಪುರಂ: ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಲೇ ಇವೆ. ಹೀಗಿರುವಾಗ ಅಪ್ತಾಪ್ತ ಬಾಲಕಿಯನ್ನು ಮೂರು ವರ್ಷದಲ್ಲಿ ಮೂರು ಬಾರಿ ರೇಪ್ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಸಂಬಂಧಿಕರೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ದುಷ್ಟತನ ಮೆರೆದಿರುವ ಕಥೆಯನ್ನು ಬಾಲಕಿ ಇದೀಗ ಹೇಳಿಕೊಂಡಿದ್ದಾಳೆ.
ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಡಿಕಾಡ್ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 17 ವರ್ಷದ ಬಾಲಕಿಯ ಮೇಲೆ ಬರೋಬ್ಬರಿ ಮೂರು ಬಾರಿ ಅತ್ಯಾಚಾರವಾಗಿದೆ. ಈ ಪ್ರಕರಣ ಸಂಬಂಧ 44 ಜನರನ್ನು ಶಂಕಿಸಲಾಗಿದೆ. ಅವರ ವಿರುದ್ಧ 32 ಕೇಸ್ ಹಾಕಲಾಗಿದ್ದು ಈಗಾಗಲೇ 20 ಜನರನ್ನು ಬಂಧಿಸಲಾಗಿದೆ ಎಂದು ಪಾಂಡಿಕಾಡ್ ಪೊಲೀಸರು ತಿಳಿಸಿದ್ದಾರೆ. ಬಾಲಕಿ ಸದ್ಯ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಸಮಿತಿಯ ರಕ್ಷಣೆಯಲ್ಲಿದ್ದಾಳೆ.
ಬಾಲಕಿಯ ಮೇಲೆ 2016 ಮತ್ತು 2017ರಲ್ಲಿ ಎರಡು ಬಾರಿ ಅತ್ಯಾಚಾರ ನಡೆಸಲಾಗಿದೆ. ಬಾಲಕಿ 13 ವರ್ಷವಿದ್ದಾಗಲೇ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಕುರಿತಾಗಿ ಆಕೆ ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆಗಳನ್ನು ನೀಡಿದ್ದಳು. 2017ರ ನಂತರ ಆಕೆ ನಿರ್ಭಯಾ ಆಶ್ರಯ ಮನೆಯಲ್ಲಿದ್ದಳು. ಅದಾದ ಮೇಲೆ ಆಕೆಯನ್ನು ಮನೆಗೆ ವಾಪಾಸು ಕಳುಹಿಸಿಕೊಡಲಾಗಿದೆ. ಅಲ್ಲಿ ಮತ್ತೊಮ್ಮೆ ಅವಳ ಮೇಲೆ ಅತ್ಯಾಚಾರವೆಸಗಲಾಗಿದೆ.
"ಒಟ್ಟು 44 ಶಂಕಿತರಿದ್ದಾರೆ. ಏಳು ಪ್ರಕರಣಗಳು ಗಂಭೀರವಾಗಿದೆ. ಘೋರ ಅಪರಾಧಗಳ ಎಲ್ಲ ಶಂಕಿತರನ್ನು ಬಂಧಿಸಲಾಗಿದೆ. ಉಳಿದ ಪ್ರಕರಣಗಳ ಶಂಕಿತರನ್ನು ಬಂಧಿಸಬೇಕಿದೆ. ನಾವು ಒಟ್ಟು 20 ಜನರನ್ನು ಬಂಧಿಸಿದ್ದೇವೆ " ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಪಿ.ಶಮ್ಸ್ ಹೇಳಿದ್ದಾರೆ. ಬಂಧಿತರಲ್ಲಿ ಬಾಲಕಿಯ ಸಂಬಂಧಿಗಳೂ ಇರುವುದಾಗಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಶಜೇಶ್ ಬಾಸ್ಕರ್ ಹೇಳಿದ್ದಾರೆ. ಪ್ರಕರಣದ ಹಿಂದೆ ಯಾವುದಾದರೂ ವೈಯಕ್ತಿಕ ಸೇಡಿದ್ದಿರಬಹುದು ಎಂದು ಅನುಮಾನಿಸಲಾಗಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)