ನ್ಯೂಸ್

ಗುಂಪು ನಿಯಂತ್ರಿಸದಿದ್ದರೆ ಮೂರನೇ ಅಲೆ ನಿಶ್ಚಿತ: ಸಾಲು ಸಾಲು ಉತ್ಸವಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕೆಂದು ತಜ್ಞರ ಎಚ್ಚರಿಕೆ

| ಪಂಕಜ ಕೆ.ಎಂ. ಬೆಂಗಳೂರು

ಹೊಸ ವರ್ಷದ ಆರಂಭದೊಂದಿಗೆ ಸಂಕ್ರಾಂತಿ ಹಬ್ಬ, ಶಿವರಾತ್ರಿ ಹಬ್ಬ ಸೇರಿ ಸಾಲುಸಾಲು ರಥೋತ್ಸವಗಳು, ಊರ ಹಬ್ಬಗಳು ಹಾಗೂ ಜಾತ್ರೆಗಳು ಬರುತ್ತಿವೆ. ಜನರ ಗುಂಪುಗೂಡುವಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ. ನಿರ್ಲಕ್ಷ್ಯಸಿದರೆ ಈ ಉತ್ಸವಗಳೇ ಕರೊನಾ 3ನೇ ಅಲೆಗೆ ನಾಂದಿ ಹಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆ ಬೆನ್ನಲ್ಲೇ ಫೆಬ್ರವರಿ - ಮಾರ್ಚ್​ನಲ್ಲಿ ಕೋವಿಡ್ ಮೂರನೇ ಅಲೆ ಎದುರಾಗಲಿದೆ ಎಂದು ಈಗಾಗಲೇಸೂಚಿಸಿರುವ ತಜ್ಞರು, ಸೋಂಕು ಹೆಚ್ಚಳಕ್ಕೆ ಸಹಸ್ರಾರು ಜನರು ಸೇರುವ ರಾಜಕೀಯ ಸಮಾವೇಶಗಳು, ಕಾರ್ಯಕ್ರಮಗಳು, ಉತ್ಸವಗಳು, ಜಾಥಾಗಳು ಕಾರಣವಾಗಬಹುದು. ಹಾಗಾಗಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಅತ್ಯವಶ್ಯಕ ಎಂದು ಸೂಚಿಸಿದ್ದಾರೆ.

ವೇಗವಾಗಿ ಹರಡುವ ಸೋಂಕು: ಈಗಾಗಲೆ ಸಂಶೋಧನೆಗಳ ಪ್ರಕಾರ ಕೋವಿಡ್ ರೂಪಾಂತರ ತಳಿ ಒಮಿಕ್ರಾನ್, ಡೆಲ್ಟಾ ಸೇರಿ ಈ ಹಿಂದಿನ ಎಲ್ಲ ತಳಿಯ ವೈರಾಣುಗಳಿಗಿಂತ ಅತೀ ವೇಗವಾಗಿ ಹರಡುತ್ತದೆ. ಹಾಗಾಗಿ ಲಸಿಕೆ ಪಡೆದಿದ್ದರೂ, ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಳ್ಳುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಾಲು ಸಾಲು ಉತ್ಸವಗಳು: ಹೊಸ ವರ್ಷದ ಆಚರಣೆ ಒಂದೆಡೆಯಾದರೆ, ನಂತರದಲ್ಲಿ ಸಂಕ್ರಾಂತಿ ಹಬ್ಬ, ಶಿವರಾತ್ರಿ ಹಬ್ಬ, ಬೆಂಗಳೂರು ಕರಗ ಸೇರಿ ರಾಜ್ಯಾದ್ಯಂತ ಮೂರು ತಿಂಗಳ ಕಾಲ ಸಾಲು ಸಾಲು ರಥೋತ್ಸವಗಳು, ಜಾತ್ರಾ ಮಹೋತ್ಸವಗಳು ಜರುಗಲಿದ್ದು, ಇವುಗಳಲ್ಲಿ ಸಹಸ್ರಾರು ಮಂದಿ ಸೇರಲಿದ್ದಾರೆ. ಇದೇ ವೇಳೆ ಗ್ರಾಮೀಣ ಭಾಗಗಳಲ್ಲಿ ಊರ ಹಬ್ಬ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಗುಂಪು ಸೇರುವುದರಿಂದ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಸ್ವಯಂ ನಿರ್ಬಂಧದ ಅಗತ್ಯವಿದೆ: ಕೋವಿಡ್ ಎರಡನೇ ಅಲೆ ತಗ್ಗಿ, ಸರ್ಕಾರ ಲಾಕ್​ಡೌನ್ ತೆರವುಗೊಳಿಸಿದ ನಂತರ ಜನರು ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಕೋವಿಡ್ ಲಸಿಕೆ ಪಡೆದರೂ ಒಂದು ವರ್ಷಕಾಲ ನಿಯಮ ಪಾಲನೆ ಕಡ್ಡಾಯ ಎಂಬ ಎಚ್ಚರಿಕೆಯ ನಡುವೆಯೂ ಶೇ.80 ಮಂದಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ, ಶಾಪಿಂಗ್ ಮಾಲ್​ಗಳು, ದೇವಾಲಯಗಳು ಸೇರಿ ಎಲ್ಲೆಡೆ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಆ ಮೂಲಕ ಜನಸಾಮಾನ್ಯರೇ ಸ್ವತಃ ಮೂರನೇ ಅಲೆಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ತಜ್ಞರು, ಕೋವಿಡ್ ಸೋಂಕು ಪ್ರಕರಣಗಳ ಏರಿಕೆ ನಿಯಂತ್ರಿಸಲು ಜನರು ಸ್ವಯಂ ನಿರ್ಬಂಧಗಳನ್ನು ಹೇರಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಮುಖ ಉತ್ಸವಗಳ ವಿವರ

  • ಜ. 10 ಇಡಗುಂಜಿ ಗಣಪತಿ ಜಾತ್ರೆ
  • ಜ. 17 ಬಾದಾಮಿ ಬನಶಂಕರಿ ಹಾಗೂ ಸವದತ್ತಿ ಎಲ್ಲಮ್ಮ ರಥೋತ್ಸವ
  • ಜ. 19 ಕೊಪ್ಪಳದ ಗವಿ ಸಿದ್ಧೇಶ್ವರ ರಥೋತ್ಸವ
  • ಜ. 19 ಮೂಗೂರು ತ್ರಿಪುರಾಸುಂದರೀ ರಥೋತ್ಸವ
  • ಜ. 28 ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವ
  • ಫೆ. 5 ಹಾವನೂರು ದ್ಯಾಮವ್ವನ ಜಾತ್ರೆ
  • ಫೆ. 16 ಬೆಂಗಳೂರಿನ ಗವಿ ಗಂಗಾಧರೇಶ್ವರ ರಥೋತ್ಸವ
  • ಫೆ. 16 ಗುಲ್ಬರ್ಗಾದ ಶ್ರೀ ರೇವಣ ಸಿದ್ಧೇಶ್ವರ ಜಾತ್ರೆ
  • ಫೆ. 19 ಶೃಂಗೇರಿ ಶಾರದಾಂಬಾ ರಥೋತ್ಸವ
  • ಮಾ. 1 ಶ್ರೀಶೈಲದ ಮಲ್ಲಿಕಾರ್ಜುನ ರಥೋತ್ಸವ
  • ಮಾ. 1 ಮಲೆ ಮಹದೇಶ್ವರ ಬೆಟ್ಟದ ಜಾತ್ರೆ,
  • ಮಾ. 14 ಮೇಲುಕೋಟೆ ವೈರಮುಡಿ ಉತ್ಸವ
  • ಮಾ. 18 ಹೋಳಿ ಹುಣ್ಣಿಮೆ

ಕೋವಿಡ್ ಪೂರ್ಣಪ್ರಮಾಣದಲ್ಲಿ ಹೋಗಿಲ್ಲ. ಹಾಗಾಗಿ ಜನರು 2019ರ ಹಿಂದಿನ ರೀತಿಯಲ್ಲಿ ಯಾವುದೇ ಆಚರಣೆಗಳನ್ನು ಮಾಡದೆ, ಇನ್ನೂ ಕೆಲವು ಸಮಯಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಸಂಚಾರ, ಗುಂಪುಸೇರುವಿಕೆಯನ್ನು ತಾವಾಗಿಯೇ ನಿಯಂತ್ರಿಸಿಕೊಳ್ಳುವುದು ಒಳ್ಳೆಯದು.

| ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ

289 ಮಂದಿಗೆ ಕೋವಿಡ್ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಪರೀಕ್ಷೆಯನ್ನು ಇಳಿಕೆ ಮಾಡಲಾಗಿದೆ. ಸೋಮವಾರ 58,495 ಪರೀಕ್ಷೆಗಳನ್ನಷ್ಟೇ ನಡೆಸಲಾಗಿದ್ದು, 289 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಇಬ್ಬರು, ಕೊಡಗು ಮತ್ತು ಉತ್ತರಕನ್ನಡದಲ್ಲಿ ತಲಾ ಒಬ್ಬರಂತೆ ನಾಲ್ವರು ಮೃಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 254 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.59 ಲಕ್ಷ ಮೀರಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,449ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ ಒಟ್ಟು 38,316 ಮಂದಿ ಮೃತಪಟ್ಟಿದ್ದು, 30.04 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ 172, ಕೊಡಗಿನಲ್ಲಿ 37, ತುಮಕೂರಿನಲ್ಲಿ 15, ದಕ್ಷಿಣ ಕನ್ನಡದಲ್ಲಿ 12, ಕೋಲಾರದಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 13 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.