ನ್ಯೂಸ್

ಜನರ ಕೈನಲ್ಲೇ ಲಾಕ್​ಡೌನ್ ಕೀ!; ಕರೊನಾ ಮೂರನೇ ಅಲೆ ನಿಶ್ಚಿತ, ಎಚ್ಚೆತ್ತುಕೊಳ್ಳದಿದ್ದರೆ ನಿರ್ಬಂಧ ಖಚಿತ, ನಾಗರಿಕರಿಗೆ ಹೊಣೆ ವಹಿಸಿದ ಸಿಎಂ..

ಬೆಂಗಳೂರು: ರಾಜ್ಯದಲ್ಲಿ ಸತತ 2ನೇ ದಿನ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಸಾವಿರ ದಾಟಿರುವುದು ಮೂರನೇ ಅಲೆ ಪ್ರವೇಶವನ್ನು ನಿಶ್ಚಿತಗೊಳಿಸಿದೆ. ಈ ಬೆಳವಣಿಗೆಯ ಗಂಭೀರತೆ ಅರಿತ ಸರ್ಕಾರ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಕೈಗೊಳ್ಳುವತ್ತ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಸೆಮಿಲಾಕ್ ಘೋಷಿಸುತ್ತಿದ್ದಂತೆಯೇ ರಾಜ್ಯದಲ್ಲೂ ಇಂತಹ ಕ್ರಮಕೈಗೊಳ್ಳಬಹುದಾದ ಸಾಧ್ಯತೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜನತೆಗೆ ಎಚ್ಚರಿಸಿದ್ದಾರೆ. ಈ ಸಲ ಲಾಕ್​ಡೌನ್ ಮಾಡಬೇಕೆ, ಬೇಡವೇ ಎಂಬುದು ನಾಗರಿಕರ ಕೈನಲ್ಲಿ ಇದೆ ಎನ್ನುವ ಮೂಲಕ ಸೋಂಕು ತಡೆಗೆ ಸಹಕರಿಸಬೇಕೆಂಬ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಕರೊನಾ ಹೊಸ ರೂಪಾಂತರಿ ‘ಒಮಿಕ್ರಾನ್’ ದಿಗಿಲು ಒಂದೆಡೆಯಾದರೆ, ಕಳೆದೊಂದು ವಾರದಿಂದ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಕರೊನಾ ಎರಡನೇ ಅಲೆ ಆಸುಪಾಸಿನ ರಾಜ್ಯಗಳಿಗೆ ದಾಳಿಯಿಟ್ಟ ಬಳಿಕ ರಾಜ್ಯಕ್ಕೆ ಕಾಲಿಟ್ಟಿತ್ತು. ತಜ್ಞರು ನೀಡಿದ ಎಚ್ಚರಿಕೆ ಪ್ರಕಾರ ಮೂರನೇ ಅಲೆಯೂ ಅದೇ ರೀತಿ ಪ್ರವೇಶಿಸುವ ಲಕ್ಷಣಗಳು ಗೋಚರಿಸಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸವಲತ್ತುಗಳ ಸುಧಾರಣೆಗೆ ಒತ್ತು, ವೈದ್ಯರು ಮತ್ತು ಸಿಬ್ಬಂದಿ ಸನ್ನದ್ಧತೆ ಜತೆಯಲ್ಲಿ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಸರ್ಕಾರ ಜಾರಿಗೆ ತರುವುದು ಖಚಿತವಾಗಿದೆ.

5ರಂದು ಮಹತ್ವದ ಸಭೆ: ಸದ್ಯಕ್ಕೆ ಚಾಲ್ತಿಯಲ್ಲಿರುವ ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳ ಗಡುವು ಜ.7ರ ಬೆಳಗ್ಗೆ 5ಗಂಟೆಗೆ ಮುಗಿಯಲಿದೆ. ಅದಕ್ಕೂ ಮುನ್ನ ಸಿಎಂ ಅಧ್ಯಕ್ಷತೆಯಲ್ಲಿ ಮತ್ತೊಂದು ಮಹತ್ವದ ಸಭೆ ಜ.5 ಅಥವಾ 6ರಂದು ನಡೆಯುವ ಸಾಧ್ಯತೆ ಇದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳು ಕುರಿತು ತಾಂತ್ರಿಕ ತಜ್ಞರ ಸಲಹಾ ಸಮಿತಿ ಡಿ.29ರಂದು ಪ್ರಮುಖ ಶಿಫಾರಸುಗಳ ಸಹಿತ ವರದಿ ಸಲ್ಲಿಸಿದ್ದು, ವೆಬೆಕ್ಸ್ ಸಂವಾದದಲ್ಲೂ ಲಾಕ್​ಡೌನ್ ಯಾವಾಗ ಜಾರಿ ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಪರಿಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು ಬಯಸಿರುವ ಸಿಎಂ, ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ಸಮಿತಿಗೆ ಸೂಚಿಸಿದ್ದಾರೆ. ಈ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಿದ್ದು, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಗಡಿಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸಲು ಸರ್ಕಾರ ತಾಕೀತು ಮಾಡಿದೆ.

ಇನ್ನೊಂದು ಬೆಳವಣಿಗೆಯಲ್ಲಿ, ಬೆಂಗಳೂರು ನಗರವನ್ನು ಕೆಂಪು ವಲಯದ ಪಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಒಂದು ವೇಳೆ ಹೀಗಾದಲ್ಲಿ ಸರ್ಕಾರದ ತಲೆಬಿಸಿ ಹೆಚ್ಚಾಗಲಿದೆ. ಜನರ ಓಡಾಟವನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇದರಿಂದ ಆರ್ಥಿಕ ಚಟುವಟಿಕೆ ಮೇಲೂ ಗಂಭೀರ ಪರಿಣಾಮ ಬೀರಲಿದೆ.

ಜನರ ಜೀವ ಉಳಿಸುವ ಜತೆಗೆ ಕರೊನಾ ಕಟ್ಟಿ ಹಾಕುವುದು ನಿರ್ಬಂಧಗಳ ಜಾರಿ ಉದ್ದೇಶವಾಗಿದ್ದು, ಇದು ರಾಜಕೀಯ ತೀರ್ವನವಲ್ಲ. ಕಾಂಗ್ರೆಸ್, ಜೆಡಿಎಸ್ ಏನು ಮಾಡುತ್ತವೆ ಎಂದು ಯೋಚಿಸುವುದಿಲ್ಲ. ಜನರ ಆರೋಗ್ಯ ರಕ್ಷಣೆಯೇ ಮುಖ್ಯವಾಗಿದ್ದು, ಕಾಂಗ್ರೆಸ್​ನ ‘ಮೇಕೆದಾಟು ಪಾದಯಾತ್ರೆ’ಯ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಒಂದು ವಾರದಿಂದ ಕರೊನಾ, ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕರೊನಾ ಸ್ಥಿತಿಗತಿ, ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಕಟ್ಟುನಿಟ್ಟಿನ ನಿಯಮಗಳನ್ನು ಜನರು ಪಾಲಿಸಿದರೆ ಲಾಕ್​ಡೌನ್ ಜಾರಿಗೊಳಿಸುವ ಪರಿಸ್ಥಿತಿ ಉದ್ಭವಿಸದು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹಲವು ರಾಜ್ಯಗಳಲ್ಲಿ ಕರೊನಾ ಪ್ರಮಾಣ ಗಮನಿಸಿದರೆ ರಾಜ್ಯಕ್ಕೆ ಮೂರನೇ ಅಲೆ ಪ್ರವೇಶ ಬಹುತೇಕ ಖಚಿತವಾದಂತಿದೆ. ಕರೊನಾ ನಿಯಂತ್ರಣದ ಜತೆಗೆ ಜನರ ಜೀವರಕ್ಷಣೆಗಾಗಿ ಇನ್ನಷ್ಟು ಕಠಿಣ ನಿರ್ಬಂಧಗಳು ಅನಿವಾರ್ಯ. | ಆರ್.ಅಶೋಕ್ ಕಂದಾಯ ಸಚಿವ

ಏನೇನು ಸಿದ್ಧತೆ?

  • 4 ಸಾವಿರ ಹೆಚ್ಚುವರಿ ಬೆಡ್ ಒಳಗೊಂಡ ಆಕ್ಸಿಜನ್ ಪೂರೈಕೆಗೆ ಕಂಪನಿಗಳ ಜತೆ ಸಂಯೋಜನೆ
  • ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆಗೆ ಕ್ರಮ

ತಜ್ಞರು ಹೇಳಿದ್ದೇನು?

  • ಸೋಂಕು ದೃಢತೆ (ಪಾಸಿಟಿವಿಟಿ) ದರ ಶೇ.5ಕ್ಕಿಂತ ಹೆಚ್ಚಾದರೆ ಲಾಕ್​ಡೌನ್ ಅನಿವಾರ್ಯ
  • ಒಟ್ಟಾರೆ ಐಸಿಯು ಹಾಗೂ ಆಕ್ಸಿಜನ್ ಹಾಸಿಗೆಗಳಲ್ಲಿ ಶೇ.40 ಭರ್ತಿಯಾದರೆ ಲಾಕ್​ಡೌನ್ ಮಾಡಿ
  • ಕೆಂಪು, ಕಿತ್ತಳೆ, ಹಳದಿ ಅಲರ್ಟ್ ಘೋಷಿಸಿದರೆ ಕೇಂದ್ರ ಮಾರ್ಗಸೂಚಿಯಂತೆ ನಿರ್ಬಂಧ ಜಾರಿ
  • ವಾರದ ಸರಾಸರಿ ಪಾಸಿಟಿವಿಟಿ ದರದ ಆಧಾರದಲ್ಲಿ ರಾತ್ರಿ, ವಾರಾಂತ್ಯದ ನಿರ್ಬಂಧಗಳು ನಿಗದಿ
  • ಎಲ್ಲರಿಗೂ ಎರಡು ಡೋಸ್ ಲಸಿಕೆ ಹಾಕುವುದು, ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಕಡ್ಡಾಯ
  • ಕೆಂಪು ಪಟ್ಟಿ ವಲಯದಲ್ಲಿದ್ದರೆ ಧಾರ್ವಿುಕ ಕೇಂದ್ರಗಳು, ಈಜುಗೊಳ, ಪಾರ್ಕ್, ಸಲೂನ್ ಮುಚ್ಚುವುದು, ಸಾರ್ವಜನಿಕ ಸಾರಿಗೆ ಮತ್ತು ಮೆಟ್ರೋ ರೈಲು ಸಂಚಾರ ಸ್ಥಗಿತ, ಹೋಟೆಲ್​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅನುಮತಿ

ರಾಜ್ಯದಲ್ಲಿ ಸೋಂಕು ಏರುಗತಿ

ದಿನಾಂಕ: ಕರ್ನಾಟಕ: ಬೆಂಗಳೂರು

2-1-22: 1187: 923

1-1-22: 1,033: 810

31-12-21: 833: 656

30-12-21: 707: 565

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ- 10,292, ಪಾಸಿಟಿವಿಟಿ ದರ- ಶೇ.1.08

ದೇಶದಲ್ಲಿ ಒಂದೇ ದಿನ 27 ಸಾವಿರ ಕೇಸ್: ಕರೊನಾ ಮೂರನೇ ಅಲೆಯ ಆತಂಕ ಎದುರಿಸುತ್ತಿರುವ ದೇಶದಲ್ಲಿ ಸೋಂಕು ಸತತವಾಗಿ ಹರಡುತ್ತಲೇ ಇದೆ. ಭಾನುವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಸೋಂಕಿನ 27,553 ಕೇಸ್ ದೃಢಪಟ್ಟಿದ್ದು ಶನಿವಾರ ದಾಖಲಾಗಿದ್ದಕ್ಕಿಂತ ಶೇಕಡ 21 ಏರಿಕೆಯಾಗಿದೆ. ಒಮಿಕ್ರಾನ್ ಕೇಸ್​ನಲ್ಲೂ ಗಣನೀಯ ಏರಿಕೆಯಾಗಿದ್ದು ಒಟ್ಟು 1,525 ಪ್ರಕರಣ ದಾಖಲಾಗಿದೆ. ಈ ಅವಧಿಯಲ್ಲಿ 284 ರೋಗಿಗಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,81,770ಕ್ಕೆ ಏರಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,22,801 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 9,249 ಜನರು ಚೇತರಿಸಿಕೊಂಡಿದ್ದು ಗುಣಮುಖರಾದವರ ಒಟ್ಟು ಸಂಖ್ಯೆ 3,42,84,561 ಆಗಿದೆ.