ಜೈಪುರ: ಕೆಲವೇ ತಿಂಗಳ ಹಿಂದೆ ಖರೀದಿಸಿದ್ದ ಖಾಲಿ ನಿವೇಶನದಿಂದ ಪಕ್ಕದಲ್ಲೇ ಇದ್ದ ವೈದ್ಯನ ಬಂಗಲೆಗೆ ಸುರಂಗ ಕೊರೆದಿರುವ ಖದೀಮರು ಬೆಳ್ಳಿಯ ಪೆಟ್ಟಿಗೆಯನ್ನು ಕಳುವು ಮಾಡಿರುವ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ. ಇಡೀ ಘಟನೆ ಥೇಟ್ ಹಾಲಿವುಡ್ ಕ್ರೈಂ ಥ್ರಿಲ್ಲರ್ ಸಿನಿಮಾದಂತೆಯೇ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಜೈಪುರದ ವೈಶಾಲಿ ನಗರದ ನಿವಾಸಿ ಡಾ. ಸುನಿತ್ ಸೊನಿ ಬುಧವಾರ (ಫೆ.24) ದೂರೊಂದನ್ನು ನೀಡಿದ್ದರು. ಪಕ್ಕದಲ್ಲೇ ಇದ್ದ ಖಾಲಿ ನಿವೇಶನದಿಂದ ಖದೀಮರು ತನ್ನ ನಿವಾಸದ ಬೇಸ್ಮೆಂಟ್ಗೆ ಸುರಂಗ ಕೊರೆದು ಬಾಕ್ಸ್ ಒಂದರಲ್ಲಿ ಇಟ್ಟಿದ್ದ ಭಾರೀ ಪ್ರಮಾಣದ ಬೆಳ್ಳಿಯನ್ನು ಕದ್ದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದಾದ ಬಳಿಕ ಪ್ರಕರಣ ತನಿಖೆ ನಡೆಸಿದ ಪೊಲೀಸರಿ ಸಂಪೂರ್ಣ ಮಾಹಿತಿ ದೊರಕಿದೆ. ಕೃತ್ಯವು ಪೂರ್ವ ನಿಯೋಜಿತ ಎಂದು ತಿಳಿದುಬಂದಿದೆ. ಕಳ್ಳತನ ಮಾಡಲೆಂದೇ ಡಾಕ್ಟರ್ ಮನೆಯ ಪಕ್ಕದ ಖಾಲಿ ನಿವೇಶನವನ್ನು ಖದೀಮರು 90 ಲಕ್ಷಕ್ಕೆ ಖರೀದಿಸಿದ್ದರು. ಇದಾದ ಬಳಿಕ ವೈದ್ಯನ ಬೇಸ್ಮೆಂಟ್ವರೆಗೆ ಸುರಂಗ ಕೊರೆದು ತನ್ನ ಕಾರ್ಯ ಸಾಧಿಸಿದ್ದಾರೆ.
ಇನ್ನು ಪೆಟ್ಟಿಗೆಯಲ್ಲಿ ಬೆಳ್ಳಿ ಇರುವ ಬಗ್ಗೆ ಮೊದಲೇ ತಿಳಿದಿದ್ದ ವೈದ್ಯರ ಆಪ್ತರಲ್ಲಿ ಯಾರಾದರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.
ಈ ಬಗ್ಗೆ ಮಾತನಾಡಿರುವ ವೈಶಾಲಿ ನಗರ ಎಸಿಪಿ ರಾಯ್ ಸಿಂಗ್ ಬೆನಿವಾಲ್, ತನಿಖೆ ಆರಂಭಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಕೆಲವು ಶಂಕಿತರನ್ನು ಪಟ್ಟಿ ಮಾಡಿದ್ದು, ಶೀಘ್ರದಲ್ಲೇ ಪ್ರಕರಣಕ್ಕೆ ಅಂತ್ಯ ಹಾಡಲಿದ್ದೇವೆಂದು ತಿಳಿಸಿದರು. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ