ನ್ಯೂಸ್

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಸೋಗಿನಲ್ಲಿ 10 ಲಕ್ಷ ರೂ. ಲೂಟಿ!

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಜನರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿವೆ. ಇದೀಗ ತಾವು ಸಿಸಿಬಿ ಪೊಲೀಸರೆಂದು ಹೇಳಿಕೊಂಡು ಶೂ ವ್ಯಾಪಾರಿಯೊಬ್ಬನಿಂದ 10 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ.

ಕಾಟನ್ ಪೇಟೆ ನಿವಾಸಿ ಮುಲರಾಮ್ ಎಂಬಾತ ಶೂ ವ್ಯಾಪಾರ ನಡೆಸುತ್ತಿದ್ದ. ಕಳೆದ ಜ.13 ರಂದು ಮುಲರಾಮ್ ಬೈಕ್​ನಲ್ಲಿ ಹೋಗುತ್ತಿದ್ದಾಗ ತಡೆದು ನಿಲ್ಲಿಸಿದ ಇಬ್ಬರು ಜನರು, ತಾವು ಸಿಸಿಬಿ ಪೊಲೀಸರು ಎಂದು ಹೇಳಿಕೊಂಡು ಹೆದರಿಸಿದ್ದಾರೆ. ಈ ವೇಳೆ ಇನ್ನಿಬ್ಬರು ಅದೇ ಸಮಯಕ್ಕೆ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಈ ಘಟನೆ ರಾತ್ರಿ 7:45 ರ ಸುಮಾರಿಗೆ ಸಿರ್ಸಿ ಸರ್ಕಲ್ ಬಳಿ ನಡೆದಿದೆ.

ಮುಲರಾಮ್ ಕೂಡಲೇ ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಆರೋಪಿಗಳು ಬ್ಲೇಡ್​​ನಿಂದ ಹಲ್ಲೆ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಮುಲರಾಮ್ ಚಾಮರಾಜಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.