ಲಖನೌ: ಕಳ್ಳತನ ಮಾಡಿದ ನಂತರ, ಎಷ್ಟು ಕದ್ದಿದ್ದೇವೆ ಎಂದು ಎಣಿಕೆ ಮಾಡುವಾಗ ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣ ಸಿಕ್ಕಿರುವುದು ತಿಳಿದು ಕಳ್ಳನಿಗೇ ಹಾರ್ಟ್ ಅಟ್ಯಾಕ್ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಘಟನೆ ಇದೀಗ ಕಳ್ಳರು ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಹೊರಬಿದ್ದಿದೆ.
ಫೆಬ್ರವರಿ 16ರ ರಾತ್ರಿ ಬಿಜ್ನೋರ್ ಜಿಲ್ಲೆಯ ಸಾಮಾಜಿಕ ಸೇವಾ ಕೇಂದ್ರದಲ್ಲಿ ಕಳ್ಳತನವಾಗಿತ್ತು. ಸುಮಾರು 7 ಲಕ್ಷ ರೂಪಾಯಿ ಹಣ ಅಲ್ಲಿಂದ ಕಳ್ಳತನವಾಗಿದ್ದಾಗಿ ತಿಳಿಸಲಾಗಿದೆ. ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು. ಆದರೆ ಅಷ್ಟೊಂದು ಹಣ ಸಿಗುತ್ತದೆ ಎನ್ನುವ ನಿರೀಕ್ಷೆ ಒಬ್ಬ ಕಳ್ಳನಿಗೆ ಇರಲಿಲ್ಲವಂತೆ. ಮನೆಗೆ ದುಡ್ಡು ತಂದು ಅದನ್ನು ಎಣಿಸಿದಾಗ 7 ಲಕ್ಷ ರೂಪಾಯಿ ಇರುವುದು ಗೊತ್ತಾಗಿದೆ. ಭಾರೀ ಪ್ರಮಾಣದ ಹಣ ಕಂಡವನಿಗೆ ಹೃದಯಾಘಾತವಾಗಿದೆ. ಅದಾದ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕದ್ದ ಹಣದಲ್ಲಿಯೇ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗೆ ಆ ಇಬ್ಬರು ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಕಳ್ಳರನ್ನು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. (ಏಜೆನ್ಸೀಸ್)